ಸಮಸ್ಯೆಗಳಿಗೆ ಸೋಲದೆ ಹೋರಾಡಿ

12CBP1 (1)
Published on

ಚಿಕ್ಕಬಳ್ಳಾಪುರ: ಜೀವನ ಜಂಜಾಟದ ನಡುವೆ ಒತ್ತಡ, ನೋವು, ಸಂಕಷ್ಟಗಳು ಎದುರಾಗುವುದು ಸರ್ವೇ ಸಾಮಾನ್ಯ. ಈ ಸಮಸ್ಯೆಗಳಿಗೆ ಸೋಲದೇ ಆತ್ಮಸ್ಥೈರ್ಯದಿಂದ ಕೆಲಸ ಮಾಡಿದಾಗ ಆಗ ಯಶಸ್ಸು, ಸುಖ ಸಿಕ್ಕೇ ಸಿಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಅಭಿಪ್ರಾಯ ಪಟ್ಟರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನದಲ್ಲಿ ಮಾತನಾಡಿದರು.

ಮೂಢನಂಬಿಕೆ, ಅನಕ್ಷರತೆ, ಕಂದಾಚಾರ, ತಪ್ಪು ಕಲ್ಪನೆಗಳು ಸೇರಿ ಹಲವು ಕಾರಣಗಳಿಂದ ದೈಹಿಕ ಮತ್ತು ಮಾನಸಿಕ ತೊಂದರೆಯನ್ನು ಅನುಭವಿಸಲಾಗುತ್ತಿದೆ. ಇದರ ನಡುವೆ ಕರೊನಾ ಮಹಾಮಾರಿಗೆ ಅನೇಕರು ಖಿನ್ನತೆಗೆ ಒಳಗಾಗಿದ್ದು, ಅವರಲ್ಲಿ ಜಾಗೃತಿ ಮೂಡಿಸಿ, ಆತ್ಮವಿಶ್ವಾಸದಿಂದ ಜೀವನ ನಡೆಸುವ ವಾತಾವರಣ ನಿರ್ಮಿಸಬೇಕಿದೆ ಎಂದು ಆಶಿಸಿದರು.

ಅನೇಕರು ಮಾನಸಿಕ ಒತ್ತಡದಿಂದ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದಕ್ಕನುಗುಣವಾಗಿ ಉತ್ತಮ ಮಾರ್ಗದರ್ಶನದ ಕೊರತೆಯೂ ಕಂಡು ಬರುತ್ತಿದೆ. ಖಿನ್ನತೆಗೊಳಗಾಗುವವರನ್ನು ತ್ವರಿತವಾಗಿ ಗುರುತಿಸಿ, ಮನೋವೈದ್ಯರು ಮತ್ತು ಕುಟುಂಸ್ಥರು ಧೈರ್ಯ ತುಂಬಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಸಲಹೆಯಿತ್ತರು.

ಎಲ್ಲರಿಗೂ ಮಾನಸಿಕ ಆರೋಗ್ಯ: ಹೆಚ್ಚಿನ ಹೂಡಿಕೆ-ಚಿಕಿತ್ಸೆಗೆ ಹೆಚ್ಚಿನ ಅವಕಾಶ ಎಂಬ ಘೋಷವಾಕ್ಯದಡಿ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ, ಇದರ ಉದ್ದೇಶವನ್ನು ಅರ್ಥೈಸಿಕೊಂಡು ಆರೋಗ್ಯಕರ ಸಮಾಜ ನಿರ್ಮಿಸಬೇಕಾಗಿದೆ ಎಂದು ಸಲಹೆಯಿತ್ತ ಜಿಲ್ಲಾ ಮಾನಸಿಕ ತಜ್ಞ ಕಿಶೋರ್ , ಮಾನಸಿಕ ಒತ್ತಡವನ್ನು ಕಡೆಗಣಿಸಿದರೆ ಮೊದಲು ಕುಟುಂಬ, ಬಳಿಕ ಸಮಾಜ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಮನೋವೈದ್ಯ ನವೀನ್ ಮತ್ತಿತರರು ಇದ್ದರು.

ಉಚಿತ ಚಿಕಿತ್ಸೆ: ಇತ್ತೀಚಿಗಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರ್ಥಿಕ, ಸಾಮಾಜಿಕ ಪರಿಣಾಮಗಳ ಜತೆಗೆ ಖಿನ್ನತೆಯು ಮತ್ತಷ್ಟು ದುರ್ಬಲರನ್ನಾಗಿಸುತ್ತಿದೆ. ಮಾನಸಿಕ ಅಸಮತೋಲನದ ಬಗ್ಗೆ ಅರಿವು ಇರುವುದಿಲ್ಲ. ಇದಕ್ಕೆ ಸಮಾಲೋಚನೆ, ಸೂಕ್ತ ಚಿಕಿತ್ಸೆಯೇ ಉತ್ತಮ ಪರಿಹಾರ ಎಂದು ಜಿಲ್ಲಾ ಮಾನಸಿಕ ತಜ್ಞ ಕಿಶೋರ್ ತಿಳಿಸಿದರು. ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಅರಿವು ಮೂಡಿಸುತ್ತಿದೆ. ಮಾನಸಿಕ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಮಾನಸಿಕ ಆರೋಗ್ಯ ಜಾಗೃತಿಗೆ ಚಾಲನೆ: ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿರುವ ಮಾನಸಿಕ ಆರೋಗ್ಯ ಜಾಗೃತಿ ರಥ ಸಂಚಾರಕ್ಕೆ ನ್ಯಾಯಾಲಯದ ಆವರಣದಲ್ಲಿ ನ್ಯಾಯಾೀಧಿಶ ಭೈರಪ್ಪ ಶಿವಲಿಂಗ ನಾಯಿಕ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net