

ಹುಬ್ಬಳ್ಳಿ: ಇಲ್ಲಿ ವಾಸಿಸುವವರೆಲ್ಲ ಸುಶಿಕ್ಷಿತರು, ಉದ್ಯಮಿಗಳು. ನಿಗದಿತ ಅವಧಿಗೆ ತೆರಿಗೆ ಪಾವತಿಸುತ್ತ ಬಂದವರು. ಇವರು ವಾಸಿಸುವುದು ದೊಡ್ಡ ಬಡಾವಣೆಯಾದರೂ ಕೊಳಚೆ ಪ್ರದೇಶಕ್ಕಿಂತ ಕಡಿಮೆ ದರ್ಜೆಯ ಸೌಲಭ್ಯ ಇಲ್ಲಿವೆ.
ಇದು ಹುಬ್ಬಳ್ಳಿಯ ವಾರ್ಡ್ ನಂ. 31ರಲ್ಲಿರುವ ಮಹಾನಗರ ಪಾಲಿಕೆ ವಲಯ ಕಚೇರಿ 6ರ ವ್ಯಾಪ್ತಿಯ ಅರಿಹಂತ ನಗರದ ಪರಿಸ್ಥಿತಿ. 300ಕ್ಕೂ ಹೆಚ್ಚು ಕುಟುಂಬಗಳು ಹಾಗೂ 1 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಅರಿಹಂತ ನಗರ ಹಾಗೂ ಪಕ್ಕದ ಸುವಿಧಾ ಕಾಲನಿಯ ಪರ್ಯಾಯ ರಸ್ತೆಯ ನಿವಾಸಿಗಳು ಮೂಲ ಸೌಲಭ್ಯಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ.
ಬಡಾವಣೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ, ವಲಯ ಕಚೇರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸೌಲಭ್ಯಕ್ಕಾಗಿ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡುತ್ತಿರುವ ಇಲ್ಲಿನ ನಿವಾಸಿಗಳ ಕೂಗು ಯಾರಿಗೂ ಕೇಳದಂತಾಗಿದೆ.
ಮೊದಲೇ ಕಳಪೆ ರಸ್ತೆಗಳಿದ್ದ ಈ ಬಡಾವಣೆಯಲ್ಲಿ ನಿರಂತರ ನೀರು ಯೋಜನೆ ಹಾಗೂ ಅಡುಗೆ ಗ್ಯಾಸ್ ಪೂರೈಕೆಗಾಗಿ ಪೈಪ್ ಹಾಕುವುದಕ್ಕಾಗಿ ತಗ್ಗು ತೋಡಿದ ನಂತರ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿತು. ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಯಿತು. ಗಟಾರುಗಳಲ್ಲಿ ಮಣ್ಣು, ತ್ಯಾಜ್ಯ ತುಂಬಿದ್ದು ನೀರು ಸರಾಗವಾಗಿ ಹರಿಯದಂತಾಗಿದೆ.
ಇನ್ನು ಬೀದಿ ದೀಪಗಳು ಹತ್ತದೆ ವರ್ಷಗಳೇ ಕಳೆದಿವೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ. ಬಂದ ತಕ್ಷಣ ಬೀದಿ ದೀಪ ಅಳವಡಿಸುತ್ತೇವೆ ಎಂಬ ಹಾರಿಕೆ ಉತ್ತರ ಸಾಮಾನ್ಯವಾಗಿದೆ. 30 ಕ್ಕೂ ಹೆಚ್ಚು ಖುಲ್ಲಾ ಜಾಗೆಗಳು ತ್ಯಾಜ್ಯ ಸಂಗ್ರಹ ಘಟಕದಂತಾಗಿವೆ. ಗಿಡ, ಗಂಟಿ ಬೆಳೆದಿರುವ ಖುಲ್ಲಾ ಜಾಗದಲ್ಲಿ ಹಾವು, ಚೇಳುಗಳಂತ ವಿಷಜಂತುಗಳಿದ್ದು, ಸುತ್ತಲಿನ ಜನರು ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಸಚಿವರಿಗೆ ಮನವಿ: ಅರಿಹಂತ ನಗರ ನಿವಾಸಿಗಳು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿದರು.