ಸಮಸ್ಯೆಗಳ ವಿವರ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು : ಎಚ್.ಕೆ ಕುಮಾರಸ್ವಾಮಿ.

ಸಮಸ್ಯೆಗಳ ವಿವರ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು : ಎಚ್.ಕೆ ಕುಮಾರಸ್ವಾಮಿ.
Published on

ಆಲೂರು : ಸಾರ್ವಜನಿಕ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಪಾಳ್ಯ ಹೋಬಳಿ ಸಿಂಗೋಡನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳನ್ನು ಪಡೆಯಲು ಕಚೇರಿ- ಕಚೇರಿ ಅಲೆಯುವುದರನ್ನ ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜನರಿಗೆ ಕರೆ ನೀಡಿದರು.

40 ವರ್ಷಗಳಿಂದ ವಾಸವಿರುವ ಮನೆಗೆ ಖಾತೆ ನೀಡಬೇಕೆಂದು ಮನವಿ: ತಾಲೂಕಿನ ಪಾಳ್ಯ ಹೋಬಳಿಗೆ ಸೇರಿದ ಪಾಳ್ಯ ಗ್ರಾಮ ಪಂಚಾಯಿತಿಯ ಬಿ.ಎಂ. ರಸ್ತೆ , ಚನ್ನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 40 ವರ್ಷಗಳಿಂದ ನಮ್ಮ ತಂದೆ_ತಾಯಿಯ ಕಾಲದಿಂದಲೂ ವಾಸವಿದ್ದೆವೆ. ಪ್ರಸ್ತುತ ಅತಿವೃಷ್ಟಿಯ ಮಳೆಯಿಂದಾಗಿ ಕಳೆದ ಎರಡು ದಿನಗಳ ಹಿಂದೆ ಮಧ್ಯರಾತ್ರಿ ಗೋಡೆ ಕುಸಿದು ಬಿದ್ದಿದ್ದು ಮನೆಯ ಪೋಷಕರು ಮತ್ತು ಮಕ್ಕಳು ಪ್ರಣಾಪಾಯದಿಂದ ಪಾರಾಗಿದ್ದು,ಮೂರು ದಿನಗಳಿಂದ ಮನೆಯಲ್ಲಿ ಮಲಗಲು ಭಯವಾಗಿ ಲಾರಿಯಲ್ಲಿ ಮಲಗುತ್ತಿದ್ದೇವೆ, ಹೆಣ್ಣು ಮಕ್ಕಳಿಗೆ ನಿತ್ಯ ಕಾರ್ಯಕ್ಕೆ ತುಂಬಾ ತೊಂದರೆಯಾಗುತಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಇದೂವರೆಗೂ ನೀರಿನ ಕಂದಾಯ , ವಿದ್ಯುತ್‌ಚಕ್ತಿ ಬಿಲ್ಲು ಇತ್ಯಾದಿಗಳನ್ನು ಪಾವತಿಸಿಕೊಂಡು ಬಂದಿದ್ದು ಅಲ್ಲದೆ ಆಧಾರ್ ಕಾರ್ಡ್,ರೇಷನ್ ಕಾರ್ಡ್,ಚುನಾವಣಾ ಗುರುತಿನ ಚೀಟಿ ಹೊಂದಿರುತ್ತೇವೆ ಆದರೆ ಸಂಬಂಧಪಟ್ಟ ಅಧಿಕಾರಿಗಳು ಮನೆಗೆ ಇದುವರೆಗೂ ಖಾತೆ ಮಾಡಿಕೊಟ್ಟಿರುವುದಿಲ್ಲ ,ಕಾರಣ ಕೇಳಿದಾಗ ಈ ಜಾಗ ಖಾತೆ ಮಾಡಿಕೊಡಲು ಬರುವುದಿಲ್ಲವೆಂದು ಸಬೂಬು ಉತ್ತರ ನೀಡುತ್ತಿದ್ದಾರೆ. ಸರ್ವೆ ನಂ146 ರಲ್ಲಿ ಸದರಿ ವಾಸದ ಮನೆಯಿದೆ ಎಂದು ಮಸೀದಿಯವರು ಕಿರುಕುಳ ನೀಡುತ್ತಿದ್ದಾರೆ ,ಆದರೆ ತಹಶಿಲ್ದಾರರ ವರದಿ ಪ್ರಕಾರ ನಮ್ಮ ಮನೆ ವಾಸ್ತವವಾಗಿ ನಾವು ಸರ್ವೆ ನಂ 146 ರಲ್ಲಿ ಸೇರಿರುವುದಿಲ್ಲ ಅದಕ್ಕೆ ದಾಖಲಾತಿಯಾಗಿ ಸಂವಿಧಾನದ ಆಶಯದಂತೆ ಹಿಂಬರಹವನ್ನು ನೀಡಿರುತ್ತಾರೆ .ಸರ್ಕಾರವೇ ಸರ್ವೆ ನಡೆಸಿ ಮತದಾನದ ಹಕ್ಕನ್ನು ಪಡೆದಿರುವ ನಾವು ಸಾಮಾಜಿಕ ನ್ಯಾಯಕ್ಕಾಗಿ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದೇವೆ.ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಮಗೆ ಕಾನೂನಾತ್ಮಕವಾಗಿ ಸೂಕ್ತ ನ್ಯಾಯವನ್ನು ಕೊಡಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸೌಮ್ಯ ರವರು, ತಾವು ವಾಸವಿರುವ ಸದರಿ ಜಾಗ ನಮ್ಮ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದಿಲ್ಲ ಬದಲಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹದ್ದಿಗಿಡದ ರಸ್ತೆಗೆ ಸೇರುತ್ತದೆ. ಹದ್ದಿಗಿರದ ರಸ್ತೆಗೆ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ. ಹೆದ್ದಾರಿಯವರು ನಿರಾಪೇಕ್ಷಣ ಪತ್ರ ನೀಡಿದರೆ ಮಾತ್ರ ಖಾತೆ ಮಾಡಿಕೊಡಲು ಪರಿಹಾರ ನೀಡಲು ಸಾಧ್ಯ ಎಂದರು.

31 ಅರ್ಜಿಗಳ ಸಲ್ಲಿಕೆ, ಸ್ಥಳದಲ್ಲೇ 11 ಅರ್ಜಿಗಳ ಇತ್ಯರ್ಥ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಳ್ಯ, ಸಿಂಗೋಡನಹಳ್ಳಿ, ಸಿಂಗಟಕೆರೆ, ಹಳೆಪಾಳ್ಯ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು 31 ಅಹವಾಲು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ರು. ಕಂದಾಯ, ಗ್ರಾಮ ಪಂಚಾಯತ್, ಆಹಾರ, ಲೋಕೋಪಯೋಗಿ, ಭೂ ಮಾಪನ, ಕೃಷಿ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನೆ, ವಿಕಲಚೇತನ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ್ದರು. ವಿವಿಧ ಇಲಾಖೆಗಳಿಂದ ಆಗಮಿಸಿದ ಅಧಿಕಾರಿಗಳು ಸ್ಥಳದಲ್ಲೇ 11 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಉಳಿದ 20 ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳಿಸಿಲಾಗಿದೆ ಎಂದು ತಹಸೀಲ್ದಾರ್ ಸೌಮ್ಯ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಜಿಲ್ಲಾ ಎಪಿಎಂಸಿ ನಿರ್ದೇಶಕ ಕೆ.ಎಸ್ ಮಂಜೇಗೌಡ, ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಕಲ್ಪನಾ, ಸದಸ್ಯ ಕಲ್ಯಾಣ ಕುಮಾರ್, ಉಮೇಶ್, ವೆಂಕಟೇಶ್, ಅಶ್ವತ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳಾದ ಸಿ.ವಿ ಲಿಂಗರಾಜು, ಪಿ.ಎಲ್ ಲಿಂಗರಾಜು, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ, ಪಾಳ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net