ಸಮಸ್ಯೆಗಳ ನಿಲ್ದಾಣ ಟ್ರಕ್ ಟರ್ವಿುನಲ್

3 dvk 1B
Published on

ಧಾರವಾಡ: ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಸರಕು ಸಾಗಣೆ ಲಾರಿಗಳ ನಿಲುಗಡೆ ಹಾಗೂ ಚಾಲಕ-ಕ್ಲೀನರ್​ಗಳ ವಿಶ್ರಾಂತಿಗಾಗಿ ಧಾರವಾಡ ಹೊರವಲಯದ ಬೇಲೂರ ಕೈಗಾರಿಕೆ ಪ್ರದೇಶದಲ್ಲಿ ನಿರ್ವಿುಸಿರುವ ಬಹುಕೋಟಿ ವೆಚ್ಚದ ಡಿ. ದೇವರಾಜ ಅರಸ್ ಟ್ರಕ್ ಟರ್ವಿುನಲ್ ಲಾರಿಗಳ ನಿಲ್ದಾಣದ ಬದಲಿಗೆ ಸಮಸ್ಯೆಗಳ ನಿಲ್ದಾಣವಾಗಿ ಪರಿಣಮಿಸಿದೆ!

ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸ್ವಂತ ಜಿಲ್ಲೆಯ ಕೈಗಾರಿಕೆ ಪ್ರದೇಶದಲ್ಲೇ ಲಾರಿ ಚಾಲಕರು ಮತ್ತು ಕ್ಲೀನರ್​ಗಳಿಗೆ ಸೌಲಭ್ಯ ಹಾಗೂ ಸುರಕ್ಷತೆಯೂ ಇಲ್ಲವಾಗಿದೆ. ಮುಖ್ಯವಾಗಿ ಈ ಟರ್ವಿುನಲ್​ಗೆ ವಿದ್ಯುತ್ ಸಂಪರ್ಕವೇ ಇಲ್ಲ. ಎಲ್ಲ ಸಮಸ್ಯೆಗಳ ಮೂಲ ಇದು. ಮೇಲಾಗಿ, ಕನಿಷ್ಠ ಸೌಲಭ್ಯ ಇಲ್ಲದಿದ್ದರೂ 24 ಗಂಟೆ ಲಾರಿ ನಿಲ್ಲಿಸಲು 50 ರೂ. ಶುಲ್ಕ ನೀಡಲೇಬೇಕು. ಆದರೆ, ಕುಡಿಯಲು ಹಾಗೂ ಬಳಕೆಗೆ ನೀರು ಪೂರೈಕೆ ಇಲ್ಲ. ರಾತ್ರಿ ಕತ್ತಲು ಆವರಿಸಿಕೊಳ್ಳುತ್ತದೆ. ಅತ್ತ ವಿಶ್ರಾಂತಿ ಗೃಹ ಮಲಗಿಕೊಳ್ಳುವುದಕ್ಕೂ ಯೋಗ್ಯವಿಲ್ಲದ ಸ್ಥಿತಿಯಲ್ಲಿದ್ದು, ಚಾಲಕ- ಕ್ಲೀನರ್​ಗಳು ತಮ್ಮ ಲಾರಿಗಳಲ್ಲಿಯೇ ಮಲಗುತ್ತಿದ್ದಾರೆ.

ನೀರು ಸರಬರಾಜು ಇಲ್ಲದ ಕಾರಣಕ್ಕೆ ಗುತ್ತಿಗೆದಾರರು ಟ್ಯಾಂಕರ್​ಗಳ ಮೂಲಕ ನೀರು ಪೂರೈಸುತ್ತಿದ್ದಾರೆ. ಅದು ಸಾಲುವುದಿಲ್ಲ. ಇಲ್ಲಿರುವ ಕ್ಯಾಂಟೀನ್ ವಿದ್ಯುತ್ ಇಲ್ಲದ ಕಾರಣಕ್ಕೆ ಸಂಜೆ 6ಕ್ಕೆಲ್ಲ ಬಂದ್ ಆಗುತ್ತದೆ. ಸಂಜೆ ಬಳಿಕ ಒಂದು ಕಪ್ ಚಹಾಕ್ಕೂ ಇಲ್ಲಿ ಪರದಾಡಬೇಕು. ಊಟ ಬೇಕಾದರೆ ಮುಖ್ಯರಸ್ತೆಗೆ ನಡೆದುಕೊಂಡು ಹೋಗಬೇಕು.

7 ಎಕರೆ 26 ಗುಂಟೆ ವಿಶಾಲವಾಗಿರುವ ಈ ಟರ್ವಿುನಲ್​ಅನ್ನು ಒಟ್ಟು 9. 27 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. 172 ಲಾರಿ, 11 ಟ್ರೖೆಲರ್ ಟ್ರಕ್ ನಿಲ್ಲಿಸಬಹುದು. 40 ಹಾಸಿಗೆ ಸಾಮರ್ಥ್ಯದ ವಿಶ್ರಾಂತಿ ಗೃಹ, ಸರಕು ಸಾಗಣೆ ಏಜೆನ್ಸಿಯವರಿಗಾಗಿ 11 ಕಚೇರಿಗಳಿವೆ. ಮೇಲ್ಮಮಹಡಿಯಲ್ಲಿ ವಿಶಾಲ ಸಭಾಗೃಹವಿದೆ. ಕೆಳಮಹಡಿ ಹಾಗೂ ಮೇಲ್ಮಹಡಿ ಸೇರಿ ಒಟ್ಟು 12 ಸ್ನಾನಗೃಹ, ಎರಡು ಮಹಡಿ ಸೇರಿ ತಲಾ 6 ಭಾರತೀಯ, 6 ಪಾಶ್ಚಿಮಾತ್ಯ ಶೌಚಗೃಹಗಳಿದ್ದರೂ ನೀರಿಲ್ಲದ ಕಾರಣ ಉಪಯೋಗವಿಲ್ಲ. ವಿಶ್ರಾಂತಿ ಗೃಹ ಕ್ರಮೇಣವಾಗಿ ಭೂತ ಬಂಗಲೆಯ ಸ್ವರೂಪ ಪಡೆದುಕೊಳ್ಳುತ್ತಿದೆ. ಎಷ್ಟೋ ಕೊಠಡಿಗಳಿಗೆ ಹಾಕಿರುವ ಬೀಗಕ್ಕೆ ಅಲ್ಲೇ ತುಕ್ಕು ಹಿಡಿಯುತ್ತಿದೆ. ಇತ್ತೀಚೆಗೆ ಹಿಂಬದಿ ಆವರಣ ಗೋಡೆ ಸಹ ಬಿದ್ದು ಹೋಗಿದ್ದು, ಲಾರಿಯವರಿಗೆ ಭದ್ರತೆಯ ಪ್ರಶ್ನೆಯೂ ಎದುರಾಗುತ್ತಿದೆ.

ಆರಂಭದಲ್ಲಿ ಇಲ್ಲಿ ವಿದ್ಯುತ್ ಸಂಪರ್ಕ ಇತ್ತು. ಆದರೆ, ಉಳಿದೆಲ್ಲ ಕೈಗಾರಿಕೆಗಳಂತೆಯೇ ಕನಿಷ್ಠ 33 ಸಾವಿರ ರೂ. ವಿದ್ಯುತ್ ಬಿಲ್ ಇತ್ತು. ಮಾಸಿಕ 60 ಸಾವಿರ ರೂ. ಮಿಕ್ಕಿ ಬಿಲ್ ಬರುತ್ತಿತ್ತು. ಹೌಹಾರಿದ ಗುತ್ತಿಗೆದಾರರು ನಮ್ಮದು ಕೈಗಾರಿಕೆಯಲ್ಲ, ಹೀಗಾಗಿ ವಿದ್ಯುತ್ ಬಿಲ್ ಸರಿಪಡಿಸಿಕೊಡಿ ಎಂದು ಹೆಸ್ಕಾಂಗೆ ಪತ್ರ ಬರೆದಿದ್ದರಂತೆ. ಆಗ ಕಡಿತಗೊಂಡ ವಿದ್ಯುತ್ ಸಂಪರ್ಕ ಇನ್ನೂ ಬಂದಿಲ್ಲ. ಸೌಲಭ್ಯಗಳು ಇಲ್ಲವೆಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ಬರುತ್ತಿಲ್ಲ . ಹೀಗಾಗಿ ಆದಾಯ ಕೊರತೆಯಾಗಿ ಎಲ್ಲವೂ ಹೊರೆಯಾಗಿದೆ ಎಂದು ಗುತ್ತಿಗೆದಾರರು ಗೋಳು ತೋಡಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಕೈಗಾರಿಕೆಗಳ ಅಭಿವೃದ್ಧಿಯಾಗಬೇಕಾದರೆ, ಸರಕು ಸಾಗಣೆಯ ಸಾರಥಿಗಳಾಗಿರುವ ಚಾಲಕ-ಪರಿಚಾರಕರಿಗೆ ಒಂದಷ್ಟು ವಿಶ್ರಾಂತಿಗಾದರೂ ಅವಕಾಶ ಮಾಡಿಕೊಡುವತ್ತ ಕೈಗಾರಿಕೆ ಸಚಿವರು ಮುತುವರ್ಜಿ ವಹಿಸಬೇಕಿದೆ.

ನನಗೆ ಗುತ್ತಿಗೆ ಪಡೆದು ಸಾಕಾಗಿ ಹೋಗಿದೆ. ವಿದ್ಯುತ್ ಸಂಪರ್ಕ ಬಂದರೆ ಎಲ್ಲ ಸೌಲಭ್ಯಗಳು ಸರಿಯಾಗುತ್ತವೆ. ಸದ್ಯ ಸರಿಯಾದ ಸೌಲಭ್ಯ ಇಲ್ಲ ಎಂದು ಲಾರಿಯವರು ಬರುತ್ತಿಲ್ಲ. ಆದಾಯವೂ ಇಲ್ಲ. ಸಿಬ್ಬಂದಿಗೆ ನನ್ನ ಕೈಯಿಂದ ಸಂಬಳ ಕೊಡುತ್ತಿದ್ದೇನೆ. ವಿದ್ಯುತ್ ಸಂಪರ್ಕ ಕೊಡಿಸುವಂತೆ ಕೇಳಿಕೊಂಡು ಟ್ರಕ್ ಟರ್ವಿುನಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಐದಾರು ಸಲ ಪತ್ರ ಬರೆದು ವಿನಂತಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈಗ ಹೊಸದಾಗಿ ಬಂದಿರುವ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆದಿದ್ದೇನೆ. ಅವರಾದರೂ ನನ್ನ ಕಷ್ಟ ಪರಿಹರಿಸುತ್ತಾರೆಯೋ ನೋಡಬೇಕಿದೆ. | ಎನ್.ಜಿ. ಸವಣೂರ, ಗುತ್ತಿಗೆದಾರ

ಟರ್ವಿುನಲ್​ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಲವಾರು ಸಮಸ್ಯೆಗಳಿರುವುದರಿಂದ ಲಾರಿಗಳು ಬರುತ್ತಿಲ್ಲ. ಗುತ್ತಿಗೆ ಪಡೆದವರು ಗೋಳಾಡುತ್ತಿದ್ದಾರೆ. ವಿಷಯವನ್ನು ಕೈಗಾರಿಕೆ ಸಚಿವರ ಗಮನಕ್ಕೂ ತಂದಿದ್ದೇನೆ. ಈಗ ಹೊಸದಾಗಿ ಶಿಖಾ ಅವರು ಟ್ರಕ್ ಟರ್ವಿುನಲ್​ಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದಿದ್ದಾರೆ. ಸದ್ಯದಲ್ಲೇ ಅವರು ಸಭೆ ಮಾಡಲಿದ್ದು, ಇಲ್ಲಿಯ ಅವ್ಯವಸ್ಥೆ ಕುರಿತು ಧ್ವನಿ ಎತ್ತಲಿದ್ದೇನೆ.| ಗೈಬುಸಾಬ್ ಹೊನ್ಯಾಳ ಡಿ. ದೇವರಾಜ್ ಅರಸ್ ಟ್ರಕ್ ಟರ್ವಿುನಲ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net