ಸಮಸ್ಯೆಗಳ ಚರ್ಚೆಗೆ ಕರೆದಿದ್ದ ಸಭೆ ಮುಂದೂಡಿಕೆ,ರೈತರ ಆಕ್ರೋಶ

CTD NEWS RITA...
Published on

ಚಿತ್ರದುರ್ಗ: ಬೇಸಿಗೆ ಸಮಯದಲ್ಲಿ ಕೃಷಿ, ತೋಟಗಾರಿಕೆಗೆ ವಿದ್ಯುತ್ ಸಮರ್ಪಕ ಪೂರೈಕೆ, ಬೆಳೆವಿಮೆ, ಸಾಲ, ಭದ್ರಾ ಮೇಲ್ದಂಡೆ ಕಾಮಗಾರಿ, ಇತ್ಯಾದಿ ಹಲವು ಸಮಸ್ಯೆಗಳ ಕುರಿತಂತೆ ಚರ್ಚಿಸಲು ಕರೆದಿದ್ದ ಸಭೆಯನ್ನು ಏಕಾಏಕಿ ಮುಂದೂಡಿರುವುದು ಸರಿಯಲ್ಲ ಎಂದು ರೈತರು ತಮ್ಮ ಆಕ್ರೋಶ ಹೊರ ಹಾಕಿದರು.

ಈ ಮೊದಲು ಡಿಸಿ ಕಚೇರಿ, ಬಳಿಕ ಜಿಪಂ ಸಭಾಂಗಣದಲ್ಲಿ ಬೆಳಗ್ಗೆ 11 ಕ್ಕೆ ಎಂದು ನಿಗದಿಯಾಗಿತ್ತು. ಆದರೆ ಈ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಕಾರ‌್ಯಕ್ರಮ ನಡೆಯುತ್ತಿರುವ ಕಾರಣಕ್ಕೆ, ಜಿಪಂ ಮಿನಿ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಲಾಯಿತು. ಆದರೆ ಅಲ್ಲಿ ಸ್ಥಳಾವಕಾಶ ಸಾಲದೆ ಹಲವು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಹೆಚ್ಚುವರಿ ಕುರ್ಚಿಗಳಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆದರೆ ಸಭೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಎರಡು ಗಂಟೆಗಳಾದರೂ ಸಭೆ ಪ್ರಾರಂಭವಾಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿದ್ದಲ್ಲದೆ ಸಭೆ ಬಹಿಷ್ಕರಿಸಿರುವುದಾಗಿ ಪ್ರಕಟಿಸಿದರು.

ಆ ಹೊತ್ತಿಗೆ ಸ್ಥಳದಲ್ಲಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಸಭೆ ಮುಂದೂಡಬೇಕೆಂಬ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಸುದ್ದಿ ತಿಳಿದು ಎಡಿಸಿ ಬಿ.ಟಿ.ಕುಮಾರಸ್ವಾಮಿ, ಡಿವೈಎಸ್‌ಪಿ.ಕೆ.ದಿನಕರ್ ಸ್ಥಳಕ್ಕೆ ಆಗಮಿಸಿದರು.

ಕೆ.ಪಿ.ಭೂತಯ್ಯ, ಈಚಘಟ್ಟದ ಸಿದ್ದವೀರಪ್ಪ, ಕೊಂಚೆ ಶಿವರುದ್ರಪ್ಪ, ಕೆ.ಸಿ.ಹೊರಕೇರಪ್ಪ, ಹಳಿಯೂರು ಸಿದ್ದಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಸ್ತಿಹಳ್ಳಿ ಸುರೇಶ್‌ಬಾಬು, ಕಬ್ಬಿಗೆರೆ ನಾಗರಾಜ್, ಶಶಿಧರ್, ಹಂಪಯ್ಯನ ಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ, ಕೆ.ಟಿ.ತಿಪ್ಪೇಸ್ವಾಮಿ, ಮಂಜಣ್ಣ, ಬೋರೇಶ್, ರವಿಕುಮಾರ್, ಕಾಂತರಾಜ್, ಲಕ್ಷ್ಮೀಕಾಂತ್, ರಂಗಸ್ವಾಮಿ, ಶಿವಕುಮಾರ್, ನಾಗರಾಜರೆಡ್ಡಿ, ಸದಾಶಿವ,ಡಿಎಸ್‌ಹಳ್ಳಿ ಮಲ್ಲಿಕಾರ್ಜುನ ಇತರರಿದ್ದರು.

ಯುಗಾದಿ ನಂತರ ಸಭೆ

ಬೆಸ್ಕಾಂ, ಕೆಪಿಟಿಸಿಎಲ್, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆವಾರು ರೈತರ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು, ಇಲಾಖೆ ಮುಖ್ಯಸ್ಥರ ಸಮ್ಮುಖದಲ್ಲಿ ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರೈತರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಯುಗಾದಿ ನಂತರ ಸಭೆ ದಿನಾಂಕ ನಿಗದಿ ಪಡಿಸಲಾಗುವುದು. ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯಲ್ಲಿ ಹೂವು ಅಳತೆಯಲ್ಲಿ ರೈತರಿಗೆ ಮೋಸವಾಗದಂತೆ ಹೆಚ್ಚಿನ ಸಿಸಿ ಟಿವಿ ಕ್ಯಾಮರಾಗಳ ಅಳ ವಡಿಕೆಯೊಂದಿಗೆ ಮೇಲ್ವಿಚಾರಣೆಗಾಗಿ ಎಪಿಎಂಸಿ ಸಿಬ್ಬಂದಿ ನೇಮಿಸುವಂತೆ ಹಾಗೂ ರೈತರಿಗೆ ಮೋಸವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಎಪಿಎಂಸಿ ಕಾರ‌್ಯದರ್ಶಿ ಕೃಷ್ಣಪ್ಪಗೆ ಸೂಚಿಸಲಾಗಿದೆ. ಯಾರಿಗೂ ಹೆದರುವ ಅಗತ್ಯವಿಲ್ಲ.ನಿಷ್ಪ್ಪಕ್ಷಪಾತವಾಗಿ ಕಾರ‌್ಯನಿರ್ವಹಿಸಬೇಕು. ಎಪಿಎಂಸಿಯಲ್ಲಿ ಯಾವುದೇ ದೂರುಗಳು ಬಾರದಂತೆ ಕಾರ‌್ಯನಿರ್ವಹಿಸಬೇಕೆಂದು ಕಾರ‌್ಯದರ್ಶಿಗೆ ತಾಕೀತು ಮಾಡಲಾಗಿದೆ ಎಂದಿದ್ದಾರೆ.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net