

ವಿಶಾಲಕುಮಾರ ಸಿಂಧೆ ದೋರನಹಳ್ಳಿ: ಇಲ್ಲಿ ಓದುವ ಮಕ್ಕಳಿದ್ದಾರೆ, ಆದರೆ ಶಿಕ್ಷಕರಿಲ್ಲ. ಕೊಠಡಿಗಳಿವೆ ಆದರೆ ಕೂರಲು ವಿದ್ಯಾರ್ಥಿಗಳು ಹೆದರುತ್ತಾರೆ. ೩೦೦ ವಿದ್ಯಾರ್ಥಿಗಳು ಇದ್ದಾರೆ. ಆದರೆ ಇವರಿಗೆ ಕಲಿಸಲು ಮೂವರೇ ಶಿಕ್ಷಕರಿದ್ದಾರೆ…ಶಹಾಪುರ ತಾಲೂಕಿನ ದೋರನಹಳ್ಳಿ ಅಂಬೇಡ್ಕರ್ ನಗರದ ಸಮುದಾಯ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
ಈ ಶಾಲೆಗೆ ಹಲವು ಸಮಸ್ಯೆಗಳು ಸುತ್ತಿಕೊಂಡಿವೆ. ೧ರಿಂದ ೭ನೇ ತರಗತಿವರಗಿನ ೩೦೩ ವಿದ್ಯಾರ್ಥಿಗಳಿಗೆ ಕೇವಲ ಮೂವರು ಕಾಯಂ, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ೯ ಕೊಠಡಿಗಳಲ್ಲಿ ಒಂದೂ ನೆಟ್ಟಗಿಲ್ಲ. ಎಲ್ಲವೂ ತೂತು ಬಿದ್ದ ಮಡಿಕೆಯಂತಾಗಿದ್ದು, ಮೇಲ್ಛಾವಣಿ ಪೂರ್ಣ ಶಿಥಿಲಗೊಂಡಿದ್ದು, ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಆತಂಕ ಎದುರಾಗಿದೆ.ಮಳೆ ಬಂದರೆ ನಿರಂತರ ಸೋರುತ್ತವೆ. ಇತ್ತೀಚಿನ ಮಳೆ ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ.
ಮಕ್ಕಳಿಗೆ ಎನ್‌ಜಿಒ ಸಂಸ್ಥೆಯೊಂದರಿಂದ ಬಿಸಿಯೂಟ ಬರುತ್ತದೆ. ಆದರೆ ಹಂದಿಗಳ ಕಾಟದಿಂದ ತಿನ್ನಲಿಕ್ಕೂ ಆಗುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಒಂದು ಕೊಳವೆಬಾವಿ ಇದ್ದು, ಅದು ತುಕ್ಕು ಹಿಡಿದಿದೆ. ಅದನ್ನು ಬದಲಿಸುವ ಗೋಜಿಗೂ ಹೋಗಿಲ್ಲ.ಇದರ ಸುತ್ತ ಗಲೀಜು ಜಮಾವಣೆಗೊಂಡು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ನೀರು ಕುಡಿಯಲು ಹೋಗುವ ಸಣ್ಣ ಮಕ್ಕಳಿಗೆ ಹಂದಿಗಳು ಕಚ್ಚಿದ ಪ್ರಸಂಗಗಳೂ ಇವೆ. ಇನ್ನು ಇಲ್ಲಿನ ನೀರು ಕಲುಷಿತವಿದ್ದು, ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಆತಂಕ ಸೃಷ್ಟಿಯಾಗಿದೆ.
ಮಳೆ ಬಂದರೆ ಇಡೀ ಗ್ರಾಮದ ನೀರು, ಚರಂಡಿಯ ತ್ಯಾಜ್ಯ ಶಾಲೆಯ ಆವರಣದಲ್ಲಿ ಆವರಿಸಿಕೊಂಡು ಕೆರೆಯಂತಾಗುತ್ತದೆ. ಪುಟ್ಟ ಮಕ್ಕಳು ಈ ನೀರಿನ ಹರಿವಿನಲ್ಲಿ ಸಿಲುಕಿ ಪ್ರಾಣಕ್ಕೆ ಕುತ್ತು ಬರುವ ಮುನ್ನ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗಿದೆ.
ಶಾಲೆಯ ಕಾಂಪೌಂಡ್ ಗೋಡೆ ಬಿದ್ದಿದ್ದು, ಸುತ್ತಲಿನ ಜನರು ಆವರಣದಲ್ಲೇ ಮಲ-ಮೂತ್ರ ಮಾಡುತ್ತಾರೆ. ದುರ್ವಾಸನೆಯಿಂದ ಮಕ್ಕಳಿಗೆ ತರಗತಿಯಲ್ಲಿ ಕೂರಲು ಆಗುತ್ತಿಲ್ಲ. ಊಟ ಮಾಡಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಯಲ್ಲಿ ಶೌಚಗೃಹವಿಲ್ಲದೆ ಹೊರಗೆ ತೆರಳುವ ಸ್ಥಿತಿ ಬಂದೊದಗಿದೆ. ವಿದ್ಯಾರ್ಥಿನಿಯರಂತೂ ತೀರ ಮುಜುಗರಪಡುವಂತಾಗಿದೆ. ಇಷ್ಟೆಲ್ಲ ಸಮಸ್ಯೆಗಳು ಇಲ್ಲಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದಿರುವುದು ದುರ್ದೈವದ ಸಂಗತಿ.
ವಿದ್ಯುತ್ ಸಮಸ್ಯೆಯಿಂದ ಸ್ಮಾರ್ಟ್ ಕ್ಲಾಸ್ ಬಂದ್
ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಕ್ಕಾಗಿ ಸರ್ಕಾರ ಈ ಶಾಲೆಗೆ ಸ್ಮಾರ್ಟ್ ಕ್ಲಾಸ್‌ಗಾಗಿ ಆಯ್ಕೆ ಮಾಡಿ ಎಲ್‌ಇಡಿ ಟಿವಿ ಮತ್ತು ಅಂತರ್ಜಾಲ ಸಂಪರ್ಕ ವ್ಯವಸ್ಥೆ ಮಾಡಿದೆ. ಆದರೆ ಶಾಲೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಸ್ಮಾರ್ಟ್ ಕ್ಲಾಸ್ ಸಹ ಬಂದ್ ಆಗಿದ್ದು ಎಲ್ಲ ಪರಿಕರಗಳು ಹಾಳಾಗುತ್ತಿವೆ. ಶಾಲೆಗೆ ೪ ಶಿಕ್ಷಕರು, ಮುಖ್ಯಗುರು, ದೈಹಿಕ ಶಿಕ್ಷಕರ ಕೊರತೆಯಿದೆ. ಕೊಠಡಿಗಳ ಕಿಟಕಿ, ಬಾಗಿಲುಗಳು ಮುರಿದಿವೆ.
ದೋರನಹಳ್ಳಿ ಅಂಬೇಡ್ಕರ್ ಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವೆ. ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದರ ಜತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆಸಿ ತಾಕೀತು ಮಾಡಲಾಗುವುದು.
| ಚನ್ನಾರಡ್ಡಿ ಪಾಟೀಲ್ ತುನ್ನೂರ್ ಶಾಸಕ ಯಾದಗಿರಿ
ನಾವು ಶಾಲೆಗೆ ಬರುವುದನ್ನು ಬಿಡಬೇಕಾದ ಸ್ಥಿತಿ ಬಂದೊದಗಿದೆ. ನಮಗೆ ಇಲ್ಲಿ ಯಾವುದೇ ಸೂಕ್ತ ಸೌಲಭ್ಯಗಳಿಲ್ಲ. ಶೌಚಗೃಹವಿಲ್ಲದೆ ಮನೆಗೆ ಹೋಗಿ ಬರಬೇಕಾಗಿದೆ. ಯಾವ ಅಧಿಕಾರಿ, ಜನಪ್ರತಿನಿಧಿಗಳು ನಮ್ಮ ಗೋಳು ಕೇಳುತ್ತಿಲ್ಲ.
|ಮಾನಸ ೭ನೇ ತರಗತಿ ವಿದ್ಯಾರ್ಥಿನಿ
ಶಾಲೆ ಆರಂಭವಾದಾಗಿನಿಂದಲೂ ನಾನ ಸಮಸ್ಯೆಗಳಿವೆ. ಆದರೆ ಯಾರೂ ಸ್ಪಂದಿಸುತ್ತಿಲ್ಲ. ಗ್ರಾಪಂನವರಿಗೆ ಈ ಶಾಲೆ ಇದೆ ಎಂಬುದೇ ಗೊತ್ತಿಲ್ಲ. ಏನಾದರೂ ಅನಾಹುತವಾದರೆ ಅದಕ್ಕೆ ಶಿಕ್ಷಣ ಇಲಾಖೆಯೇ ನೇರ ಹೊಣೆ.
| ಪರಶುರಾಮ ಬುಕ್ಕುಲ್ಸಾ ಮಾಜಿಕ ಕಾರ್ಯಕರ್ತ