

ಸುಂಟಿಕೊಪ್ಪ: ಕೊಡಗು ಪತ್ರಕರ್ತ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಸುಂಟಿಕೊಪ್ಪದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಪಟ್ಟಣದ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಸಂಬಂಧಿಸಿದವರ ಗಮನ ಸೆಳೆದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ತಯಾರಾಗಿದೆ. ಗ್ರಾಪಂ ವ್ಯಾಪ್ತಿಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಪಂನೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಇದಲ್ಲದೆ 29 ಇಲಾಖೆಗಳು ಕೂಡ ಸಹಕಾರ ನೀಡಬೇಕು. ಸುಂಟಿಕೊಪ್ಪದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಜತೆಗೂಡಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹಿರಿಯರಾದ ಎಂ.ಎ.ವಸಂತ್ ಮಾತನಾಡಿ, ವಿದ್ಯುತ್ ಅಡಚಣೆ, ನೀರಿನ ಸಮಸ್ಯೆಗಳಿಂದ ಬಡಾವಣೆ ಜನ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ತೊಂದರೆ ಎದುರಾದರೆ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸುನಿಲ್, ವಿದ್ಯುತ್ ಓವರ್‌ಲೋಡ್ ಆದಾಗ ಒಂದೇ ದಿನ ಮೂರು ಮೋಟಾರುಗಳು ಸುಟ್ಟು ಹೋಗಿವೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಆದರೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದರು.
ಹಿರಿಯರಾದ ಡಿ.ನರಸಿಂಹ ಮಾತನಾಡಿ, ಮುಖ್ಯರಸ್ತೆ ಎರಡೂ ಬದಿಯಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಮಾಂಸದಂಗಡಿಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮಾಂಸ, ಮೀನು ಮಾರಾಟ ಈಗ ತಾಂತ್ರಿಕ ದೋಷದಿಂದ ಮಾಡಲಾಗುತ್ತಿದೆ. 11 ಅಂಗಡಿಗಳ ಮಾಲೀಕರು ಉಚ್ಚ ನ್ಯಾಯಾಲಯದಲ್ಲಿ ಸ್ಟೇ ತಂದಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಪಂಚಾಯಿತಿ ಸ್ವಂತ ಮಳಿಗೆಗೆ ಸ್ಥಳಾಂತರ ಮಾಡಲಾಗುತ್ತದೆ. ಶುಚಿತ್ವ ಕಾಪಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಇಸಾಕ್ ಖಾನ್ ಮಾತನಾಡಿ, ವಿದ್ಯುತ್ ಇಲಾಖೆಯ ಬಿಲ್ ಸಮಸ್ಯೆ ಹೆಚ್ಚಿದೆ. ಒಂದು ತಿಂಗಳು 19 ರೂ. ಬಿಲ್ ಬಂದರೆ ಮತ್ತೊಂದು ತಿಂಗಳು 2 ಸಾವಿರ ರೂ. ಬಿಲ್ ಬಂದಿದೆ. ಇದಕ್ಕೆ ಕಾರಣ ಏನು...? ಇದಕ್ಕೆ ವಿದ್ಯುತ್ ಇಲಾಖೆಯಿಂದ ಸ್ಪಂದನೆ ದೊರಕುತ್ತಿಲ್ಲ. ಬಿಲ್ ವ್ಯತ್ಯಯ ಉಂಟಾಗುತ್ತಿದೆ. ಬೀದಿ ದೀಪ ಆನ್ ಮಾಡಲು ಜನ ಇಲ್ಲ ಎಂದರು.
ಇದಕ್ಕೆ ವಿದ್ಯುತ್ ಇಲಾಖೆಯ ಜೆಇ ಲವಕುಮಾರ್ ಪ್ರತಿಕ್ರಿಯಿಸಿ, 199 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದಕ್ಕಿಂತ ಹೆಚ್ಚು ಉಪಯೋಗಿಸಿದರೆ ಬಿಲ್ ಹೆಚ್ಚಾಗುತ್ತದೆ. ಬೀದಿ ದೀಪಗಳ ನಿರ್ವಹಣೆಯನ್ನು ಪಂಚಾಯಿತಿ ಮಾಡುತ್ತಿದೆ. ವಿದ್ಯುತ್ ಇಲಾಖೆಯಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಸಂವಾದದಲ್ಲಿ ಪಟ್ಟಣದಲ್ಲಿ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಕುರಿತ ದೂರುಗಳು ಹೆಚ್ಚಾಗಿ ಕೇಳಿಬಂತು. ಹಿರಿಯರಾದ ವಹೀದ್ ಜಾನ್, ಗ್ರಾಪಂ ಮಾಜಿ ಅಧ್ಯಕ್ಷ ಕರೀಂ, ಆಟೋ ಚಾಲಕ ಪ್ರಶಾಂತ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಮತ್ತಿತರರು ಪಾರ್ಕಿಂಗ್ ಸಮಸ್ಯೆ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಗ್ರಾಪಂ ಅಧ್ಯಕ್ಷ ಸುನಿಲ್, ಟ್ರಾಫಿಕ್ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿದೆ. ಹೊಸ ಮಾರುಕಟ್ಟೆಗೆ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಮಾರುಕಟ್ಟೆ ಕಡೆ ಸಂತೆ ಅಂಗಡಿ ಸ್ಥಳಾಂತರ ಮಾಡಿದ ನಂತರ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಸುಂಟಿಕೊಪ್ಪ ಠಾಣೆಯ ಎಎಸ್‌ಐ ರಮೇಶ್ ಮಾತನಾಡಿ, ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ಕರೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್ ಅನಧಿಕೃತ ಲೇಔಟ್, ಮಾನವೀಯ ಒಕ್ಕೂಟದ ಕೆ. ಎಸ್.ಅನಿಲ್ ಸುಂಟಿಕೊಪ್ಪ ಆಸ್ಪತ್ರೆ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ಪತ್ರಕರ್ತರ ಸಂಘದಿಂದ ಸಮಾಜಮುಖಿ ಕಾರ್ಯಕ್ರಮ ಮಾಡಲಾಗುತ್ತಿದೆ. ಅಲ್ಲದೆ ಪಟ್ಟಣದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಈ ರೀತಿಯ ಸಂವಾದ ಆಯೋಜಿಸಲಾಗುತ್ತಿದೆ. ಸುಂಟಿಕೊಪ್ಪ ಭಾವೈಕ್ಯದ ಊರು, ಇಲ್ಲಿ ಫುಟ್‌ಬಾಲ್ ಕ್ರೀಡೆ ಹೆಚ್ಚು ಪ್ರಸಿದ್ಧಿ. ಸೌಹಾರ್ದತೆಗೆ ಹೆಸರಾದ ಸುಂಟಿಕೊಪ್ಪ ಪಟ್ಟಣದ ಹಲವು ಸಮಸ್ಯೆಗಳನ್ನು ಬಗೆಯರಿಸಬೇಕಿದೆ ಎಂದರು.
ಮಾಧ್ಯಮ ಸಂವಾದದಲ್ಲಿ ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ಕ್ಷೇಮಾಭಿವೃದ್ಧಿ ಅಧ್ಯಕ್ಷ ಜಿ.ವಿ.ರವಿಕುಮಾರ್, ನಿರ್ದೇಶಕರಾದ ವಿಶುಕುಮಾರ್, ರಂಜಿತ್ ಕವಲಪಾರ, ಗುರುದರ್ಶನ್, ಲಕ್ಷ್ಮೀಶ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಖಜಾಂಚಿ ನವೀನ್ ಕುಮಾರ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಕಾಂಗ್ರೆಸ್ ಮುಖಂಡ ಯಂಕನ ಶ್ರೀರಾಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.