ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ

SHASHIKALA TENGALI
Published on

ಕಲಬುರಗಿ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ಅಂಧ ಬಾಲಕರ ಶಾಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಪುನರ್ವಸತಿ ಯೋಜನೆಯಡಿ ಆಯ್ಕೆಯಾದ 21 ಫಲಾನುಭವಿಗಳಿಗೆ ಸಾಲ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಬ್ಯಾಂಕಿನ ಜತೆ ವ್ಯವಹರಿಸುವ ಘಟಕ ಸ್ಥಾಪನೆ ಅಗತ್ಯ ಮಾಹಿತಿ ಒದಗಿಸುವ ಒಂದು ದಿನದ ಅರಿವು ಕಾರ್ಯಾಗಾರ ಶುಕ್ರವಾರ ಜರುಗಿತು.
ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮಾತನಾಡಿ, ಮಹಿಳಾ ಅಭಿವೃದ್ಧಿ ನಿಗಮವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಮಾಜದ ತಳಮಟ್ಟದಲ್ಲಿರುವ ವಿಮುಕ್ತ ದೇವದಾಸಿ ಮಹಿಳೆಯರು, ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು. ಎಚ್.ಐ.ವಿ ಸೋಂಕಿತ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ವಿಶೇಷವಾಗಿ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಯೋಜನೆಗಳು ಸಮಾಜದ ಕಟ್ಟ ಕಡೆಯ ಮಹಿಳೆಯರಿಗೆ ಸಮಾನವಾಗಿ ತಲುಪಿಸಲಾಗುತ್ತಿದೆ ಎಂದರು.
ತಾಲೂಕು ಮಟ್ಟದಲ್ಲಿ ನಿಗಮದ ಯೋಜನೆಗಳ ಅನುಷ್ಠಾನದಲ್ಲಿನ ತೊಡಕು ನಿವಾರಿಸಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯೋಜನೆಗಳ ಫಲಾನುಭವಿಗಳ ಸಂವಾದ ಕಾರ್ಯಕ್ರಮ ಆಯೋಜಿಸಿ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈಗಾಗಲೇ ಸಮೃದ್ಧಿ ಯೋಜನೆಯಡಿ ಆಳಂದ ತಾಲೂಕಿನ ಮಹಿಳಾ ಬೀದಿ ವ್ಯಾಪಾರಿಗಳಿಗೆ ಕೋವಿಡ್ ಸಂಕಷ್ಟ ಪರಿಸ್ಥತಿಯಲ್ಲಿ ಆರ್ಥಿಕ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ಉಪ ನಿರ್ದೇಶಕ ಜಿ.ಎಸ್.ಗುಣಾರಿ ಮಾತನಾಡಿ, ಕರೊನಾ ಸಂಕಷ್ಟ ಪರಿಸ್ಥಿತಿಯಿರುವ ಕಾರಣ ಸಾಲದ ಹಣವನ್ನು ಸದುಪಯೋಗ ಪಡೆದು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದರು.
ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎ.ವಿ.ಪಾಟೀಲ್, ಸಾಲ ನಿರ್ವಹಣೆ, ಘಟಕ ಸ್ಥಾಪನೆ, ಮರುಪಾವತಿ, ಕೇಂದ್ರ ಸರ್ಕಾರದ ಯೋಜನೆಗಳು, ಕ್ರೆಡಿಟ್ ಕಾರ್ಡ, ಪೋನ್ ಪೇ, ಗೂಗಲ್ ಪೇ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ನಿಗಮದ ಅಭಿವೃದ್ದಿ ನಿರೀಕ್ಷಕಿ ಟಿ.ಎನ್.ಶಾಂತಲ, ಮಹಿಳಾ ಶಕ್ತಿ ಕೇಂದ್ರದ ಉಮಾ, ಪೂಜಾ, ಜೀಜಾ, ಮಾತೃ ವಂದನಾ, ಸ್ನೇಹಾ ಸೊಸೈಟಿ ಅಧ್ಯಕ್ಷೆ ಮನೀಷಾ ಚೌಹಾಣ್, ಬೀರಲಿಂಗ ಇದ್ದರು.

ಸಾಲ ಪಡೆದ ಫಲಾನುಭವಿಗಳು ತಮ್ಮ ಭಿಕ್ಷಾಟನೆ ವೃತ್ತಿ ತೊರೆದು ಸಾಲದ ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು.
ಶಶಿಕಲಾ ಟೇಂಗಳಿ, ಅಧ್ಯಕ್ಷೆ,
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net