

ವಿಜಯಪುರ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಆಫ್ ಬ್ಯಾಂಕ್ ಇಂಡಿಯಾ (ಸಿಡ್ಬಿ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ವತಿಯಿಂದ ಸೆ.6ರಂದು ಬುಧವಾರ ಬೆಳಗ್ಗೆ 10-30ಕ್ಕೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಹಾಗೂ ಹಣಕಾಸಿನ ನೆರವು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಸಿಎ ಶಶಿಧರ ಶೆಟ್ಟಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸಿಯಾ ಸಂಘ 1949ರಲ್ಲಿ ಹುಟ್ಟು ಹಾಕಲಾಗಿದೆ. ಈಗ 74ನೇ ವರ್ಷದ ವಸಂತಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಸಿಯಾ ಸಂಸ್ಥೆಯು ರಾಜ್ಯ ಮತ್ತು ದೇಶದ ಸಣ್ಣ ಕೈಗಾರಿಕೆಗಳ ಹಿತಾಸಕ್ತಿ ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಕಾಸಿಯಾ ಪ್ರಮುಖ ಪಾತ್ರ ವಹಿಸಿದೆ. ಇದರ ಜತೆ ರಾಜ್ಯ ಸರ್ಕಾರದಿಂದ ಕೈಗಾರಿಕೆಗಳಿಗೆ ಜಾರಿಯಾಗುವ ಯೋಜನೆಗಳು, ನೀತಿ ಕುರಿತಂತೆ ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬುಧವಾರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಹಿಸುವರು. ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ನವದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಅಪ್ಪಾಜಿ ನಾಡಗೌಡ, ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ವಿಧಾನಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ್, ಕಾಸಿಯಾ ಉಪಾಧ್ಯಕ್ಷ ಎಂ.ಜಿ.ರಾಜಗೋಪಾಲ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ್ ಜಂಟಿ ಕಾರ್ಯದರ್ಶಿ ಶ್ರೆಯಾನ್ಸ್‌ಕುಮಾರ ಜೈನ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.