

ಕಡೂರು: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಲಿತರನ್ನು ಸಮಸ್ಯೆಗಳು ಇಂದಿಗೂ ಕಾಡುತ್ತಿವೆ. ಪರಿಹಾರ ಕಂಡುಕೊಳ್ಳಲು ಆಯೋಜಿಸುವ ದೌರ್ಜನ್ಯ ಸಮಿತಿ ಸಭೆ ಕಾಟಾಚಾರಕ್ಕೆ ಮಾಡುವುದಾದರೇ ಸಭೆಯನ್ನು ನಡೆಸುವುದೇ ಬೇಡ ಎಂದು ಬ್ಲ್ಯೂಆರ್ಮಿ ಸಂಘದ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಕಿಡಿಕಾರಿದರು.
ತಾಪಂನಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ತಾಲೂಕು ಮಟ್ಟದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಪ.ಜಾತಿ, ಪ.ಪಂಗಳ ಕುಂದು ಕೊರತೆಗಳನ್ನು ಆಲಿಸಲು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆದು ಒಂದೂವರೆ ವರ್ಷ ಕಳೆದಿದೆ. ಸಭೆಗಳಲ್ಲಿ 20 ಪ್ರಶ್ನೆಗಳು ಬಂದರೆ ಎರಡು ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಲಭ್ಯವಿರುವುದಿಲ್ಲ. ಪೊಲೀಸ್ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳೇ ಸಭೆಗಳಿಗೆ ಹಾಜರಾಗುವುದಿಲ್ಲ. ದೊಡ್ಡ ತಾಲೂಕು ಆಗಿರುವ ಕಡೂರಿನಲ್ಲಿ ದಲಿತರ ಸಮಸ್ಯೆಗಳು ಸಾಕಷ್ಟಿವೆ. ಇವುಗಳನ್ನು ಆಲಿಸುವ ಅಧಿಕಾರಿಗಳೇ ಇಲ್ಲದಿದ್ದರೆ ಸಭೆಗಳನ್ನು ಆಯೋಜಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ಷೇಪಿಸಿದರು.
ತಾಲೂಕಿನ ದಲಿತ ಕಾಲನಿಗಳ ಗ್ರಾಮಗಳಿಗೆ ಪ್ರತ್ಯೇಕ ಸ್ಮಶಾನಕ್ಕೆ ಜಾಗ ಒದಗಿಸಿಕೊಡಬೇಕಿದೆ. ಕೇದಿಗೆರೆ ಗ್ರಾಮದಲ್ಲಿ 60 ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಮೊದಲು ಉಳುಮೆ ಮಾಡಿದ ಮಾಲೀಕ ಉಳುಮೆ ಮಾಡುತ್ತಿದ್ದು, ಇದನ್ನು ಬಿಡಿಸಿಕೊಡಬೇಕಿದೆ. ಕೃಷಿ ಇಲಾಖೆಯಲ್ಲಿ ದಲಿತರಿಗೆ ಟಾರ್ಪಾಲ್ ದೊರಕುತ್ತಿಲ್ಲ. ಅಂಬೇಡ್ಕರ್ ಭವನದಲ್ಲಿ ಸಮರ್ಪಕ ನೀರು ಸರಬರಾಜಿಲ್ಲ, ಸ್ವಚ್ಛತೆ ಮರೀಚಿಕೆಯಾಗಿದೆ. ಇಲಿ, ಹೆಗ್ಗಣಗಳಿಂದ ದುರ್ನಾಥ ಬೀರುತ್ತಿದೆ. ಪಟ್ಟಣದಲ್ಲಿ 300 ಮನೆ ಮಂಜೂರಾಗಿದ್ದು, ಲಾನುಭವಿಗಳಿಂದ ಗುತ್ತಿಗೆದಾರ 61 ಸಾವಿರ ರೂಪಾಯಿ ಕಟ್ಟಿಸಿಕೊಂಡು ಪರಾರಿಯಾಗಿದ್ದಾನೆ. ಹುಲಿಕೆರೆ ಗ್ರಾಮದ 4 ಎಕರೆ ಪ್ರದೇಶದಲ್ಲಿ 100 ದಲಿತ ಕುಟುಂಬಗಳು ವಾಸಿಸುತ್ತಿವೆ. ಪಹಣಿಯಲ್ಲಿ ಗೋಕಟ್ಟೆ ಎಂದು ಬರುತ್ತಿದೆ. ಇ-ಸ್ವತ್ತಿನ ಸಮಸ್ಯೆ ಹೆಚ್ಚಾಗಿದೆ. ಅಂಬೇಡ್ಕರ್ ನಿಗಮದ ಅಧಿಕಾರಿ ಕಡೂರಿಗೆ ವಾರಕ್ಕೊಮ್ಮೆಯಾದರೂ ಬರಬೇಕಿದೆ ಎಂದು ಶೂದ್ರ ಶ್ರೀನಿವಾಸ್ ಒತ್ತಾಯಿಸಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ದಲಿತರ ವಿವಿಧ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹರಿಸಲು ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಲಾಗುತ್ತದೆ. ಬೀರೂರು ಪುರಸಭೆಯಲ್ಲಿ ಡಿಡಿ ಮನೆಗಳಿಗೆ ಹಣ ಕಟ್ಟಿಸಿಕೊಂಡಿರುವ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ದೌರ್ಜನ್ಯ ಸಮಿತಿ ಸಭೆಗೆ ಎಲ್ಲ್ಲ ಇಲಾಖೆ ಅಧಿಕಾರಿಗಳು ಹಾಜರಿರುವಂತೆ ಸೂಚನೆ ನೀಡಲಾಗುವುದು. ಮೂರು ತಿಂಗಳಿಗೊಮ್ಮೆ ದೌರ್ಜನ್ಯ ಸಮಿತಿ ಸಭೆ ನಡೆಸಲಾಗುವುದು. ಕೆರೆ ಒತ್ತುವರಿ ಮತ್ತು ಸ್ಮಶಾನ ಒತ್ತುವರಿ ಮಾಡಿರುವ ಪ್ರಕರಣಗಳಿಗೆ ತೆರವುಗೊಳಿಸಿಕೊಡುವ ಕಾರ್ಯ ಮಾಡಲಾಗುತ್ತದೆ ಎಂದರು.
ತಾಪಂ ಇಒ ಸಿ.ಆರ್.ಪ್ರವೀಣ್, ತಾಲೂಕು ಸಮಾಜ ಕಲ್ಯಾಧಿಣಾಕಾರಿ ನಟರಾಜ್, ದಲಿತ ಮುಖಂಡರಾದ ಕೃಷ್ಣಪ್ಪ, ಬಿ.ಟಿ. ಚಂದ್ರಶೇಖರ್, ಟಿ.ಲಕ್ಷ್ಮಣ್, ಬೀರೂರು ಗಿರೀಶ್, ಮಂಜಪ್ಪ, ಹುಲ್ಲೇಹಳ್ಳಿ ಲಕ್ಷ್ಮಣ್, ಈಶ್ವರಪ್ಪ, ಸಂತೋಷ್, ನಾರಾಯಣ್, ಮೂರ್ತಿ ಸುರೇಶ್, ಶಾಂತಕುಮಾರ್, ಬಿ.ಟಿ.ಗಂಗಾಧರ್ ನಾಯ್ಕ ಇತರರಿದ್ದರು.