

ಕಳಸ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜಿಸಿ ಜಿಲ್ಲಾಧಿಕಾರಿಯೇ ಹಾಜರಾಗದಿದ್ದರೆ ಏನು ಪ್ರಯೋಜನ? ಕಳೆದ ಎರಡು ವರ್ಷಗಳಿಂದ ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಸಿಗದಿದ್ದರೆ ಇಂಥ ಕಾರ್ಯಕ್ರಮ ಯಾಕೆ ಮಾಡುತ್ತೀರಿ? ಡಿಸಿ ಬಂದ ನಂತರ ಸಭೆ ಮುಂದುವರಿಸಿ.
ಇದು ಮರಸಣಿಗೆಯಲ್ಲಿ ಶನಿವಾರ ಕಳಸ ತಹಸೀಲ್ದಾರ್ ನಂದಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ. ಭೂಕುಸಿತದಿಂದ ಮನೆ ಕಳೆದುಕೊಂಡು ನಾಲ್ಕು ವರ್ಷವಾದರೂ ಚನ್ನಡ್ಲು ಪ್ರದೇಶದ ನಿರಾಶ್ರಿತರಿಗೆ ಹಕ್ಕುಪತ್ರ ಕೊಡಲೂ ಸಾಧ್ಯವಾಗಲಿಲ್ಲ. ಇದಕ್ಕಾಗಿ 20 ದಿನಗಳ ಕಾಲ ಹೋರಾಟ ಮಾಡಿದ ನಂತರ ಭೂಮಿ ಗುರುತು ಮಾಡಿ ಹಕ್ಕು ಪ್ರತ್ರ ನೀಡುವ ಭರವಸೆ ಕೊಟ್ಟ ಡಿಸಿ ನಮ್ಮನ್ನು ಮರೆತಿದ್ದಾರೆ. ಇಲಾಖೆ ಬಡವರ ಪರವಿದೆಯೇ? ಇದಕ್ಕೆ ಡಿಸಿಯೇ ಉತ್ತರಕೊಡಬೇಕು. ಇಲ್ಲವಾದರೆ ಸಭೆ ರದ್ದುಗೊಳಿಸಿ ಎಂದು ನಿರಾಶ್ರಿತರು ಪಟ್ಟು ಹಿಡಿದರು. ಗ್ರಾಮಸ್ಥರ ಪ್ರಶ್ನೆಗಳಿಗೆ ತಹಸೀಲ್ದಾರ್ ತಬ್ಬಿಬ್ಬಾದರು.
ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದೇವೆ. ಬಾಡಿಗೆ ಹಣವನ್ನೂ ಸರ್ಕಾರ ಕೊಟ್ಟಿಲ್ಲ. ಬಾಡಿಗೆ ಕಟ್ಟದಿದ್ದರಿಂದ ಮನೆ ಖಾಲಿ ಮಾಡಿ ಮಾಲೀಕರು ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಐಷಾರಾಮಿ ಮನೆಯಲ್ಲಿದ್ದೀರಿ. ನಮ್ಮ ಪರಿಸ್ಥಿತಿಯನ್ನೊಮ್ಮೆ ನೋಡಿ. ನಮ್ಮ ಸ್ಥಿತಿಯಲ್ಲಿ ನೀವು ಇರುತ್ತಿದ್ದರೆ ಏನು ಮಾಡುತ್ತೀರಿ? ಬಾಡಿಗೆ ಕೊಡುತ್ತೇವೆ, ಹಕ್ಕುಪತ್ರ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತೀರಿ. ಸುಳ್ಳಿಗೂ ಒಂದು ಮಿತಿ ಬೇಕು. ನಮಗೆ ಹಕ್ಕುಪತ್ರ ಮತ್ತು ಬಾಡಿಗೆ ಹಣ ಕೊಡಿ. ಇಲ್ಲವಾದರೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ನಿರಾಶ್ರಿತರು ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು.