ಸಮಸ್ಯೆ ತಂದಿಟ್ಟ ಸಾರಿಗೆ ಸಂಸ್ಥೆ

h4-Bus Terminal 2
Published on

ಹುಬ್ಬಳ್ಳಿ: ಹೊಸೂರಲ್ಲಿ ಪ್ರಾದೇಶಿಕ ಬಸ್ ಟರ್ವಿುನಲ್ ಮಾ. 1ರಿಂದ ಕಾರ್ಯಾಚರಣೆ ಆರಂಭಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದು ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ.

ಫೆ. 2ರಂದು ಲೋಕಾರ್ಪಣೆಯಾಗಿದ್ದರೂ ಬಸ್ ಬಿಡತೊಡಗಿದ್ದು ತಿಂಗಳ ನಂತರ. ಅದು ಕೂಡ ಅರ್ಧಂಬರ್ಧ ಆಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣಕ್ಕೆ 300 ಬಸ್​ಗಳನ್ನು ಹಳೇ ನಿಲ್ದಾಣದಿಂದ ಸ್ಥಳಾಂತರ ಮಾಡಲಾಗಿದೆ. ಆದರೆ, ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಇಲ್ಲಿಗೆ ಬಸ್​ಗಳು ಬರುತ್ತಿವೆ. ರಾತ್ರಿ 10ರಿಂದ ಮೊದಲಿನಂತೆ ಹಳೇ ಬಸ್ ನಿಲ್ದಾಣ ಸೇರುತ್ತಿವೆ. ಈ ವಿಷಯವನ್ನು ಸಾರಿಗೆ ಸಂಸ್ಥೆ ಮೊದಲೇ ತಿಳಿಸಿರಲಿಲ್ಲ. ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ಯಾವ ಕಡೆ ಹೋಗಬೇಕು ಎಂಬ ಗೊಂದಲಕ್ಕೆ ಈಡಾಗುತ್ತಿದ್ದಾರೆ.

ಹೊಸ ವ್ಯವಸ್ಥೆಗೆ ಜನ ಹೊಂದಿಕೊಳ್ಳುವುದೇ ಕಷ್ಟ. ಅಂತಹದರಲ್ಲಿ ಸಮರ್ಪಕ ಸೇವೆ ಸಿಗದೇ ಹೋದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ಜನಸಂದಣಿ ಕಡಿಮೆ ಇದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸದ್ಯಕ್ಕೆ ರಾತ್ರಿ 10ರವರೆಗೆ ಮಾತ್ರ ಬಸ್​ಗಳು ಹೊಸೂರ ಟರ್ವಿುನಲ್​ಗೆ ಬರುವ ವ್ಯವಸ್ಥೆ ಮಾಡಲಾಗಿದೆ. ಇನ್ನೆರಡು ದಿನ ನೋಡಿಕೊಂಡು 24 ಗಂಟೆ ಕಾರ್ಯಾಚರಣೆಯ ವ್ಯವಸ್ಥೆಯಾಗಲಿದೆ. ಎಂದು ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.

ಶೀಘ್ರ ಸಂಪೂರ್ಣ ಸೇವೆ ಹೊಸೂರ ಬಸ್ ಟರ್ವಿುನಲ್ ದಿನದ 24 ಗಂಟೆ ಸೇವೆ ನೀಡುವಂತೆ ಸಜ್ಜುಗೊಳಿಸಲಾಗುತ್ತಿದೆ. ಹೋಟೆಲ್, ರಿಜರ್ವೆಶನ್ ಕೌಂಟರ್, ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ಕೆಲವೇ ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಇದು ಕಾರ್ಯಾಚರಣೆ ನಡೆಸಲಿದೆ.| ರಾಮನಗೌಡ್ರ

ವಿಭಾಗೀಯ ನಿಯಂತ್ರಣಾಧಿಕಾರಿ, ಗ್ರಾಮೀಣ ಪೊಲೀಸ್ ಹೊರಠಾಣೆ

ಬಸ್ ನಿಲ್ದಾಣದಲ್ಲಿ ಹೊರಠಾಣೆ ಆರಂಭಿಸಲು ಕೋರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ವ್ಯವಸ್ಥೆಯಾಗಲಿದ್ದು, ಪ್ರಯಾಣಿಕರಿಗೆ ಭದ್ರತೆ ವ್ಯವಸ್ಥೆಯಾಗಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ (ಗ್ರಾಮೀಣ) ರಾಮನಗೌಡ್ರ ಹೇಳುತ್ತಾರೆ.

ರಸ್ತೆ ಗೋಳು

ಹೊಸೂರ್ ಟರ್ವಿುನಲ್​ನ ಹಿಂಬದಿ (ನೂತನ ಕೋರ್ಟ್ ಎದುರು) ರಸ್ತೆ ದ್ವಿಪಥ ಕಾಮಗಾರಿ ಇನ್ನೂ ಮುಗಿದಿಲ್ಲ. ಸದ್ಯ ಅಲ್ಲಿ ವಾಹನ ಸಂಚಾರ ಸುಲಲಿತವಾಗಿಲ್ಲ. ಇದು ಕೂಡ ಟರ್ವಿುನಲ್ ಕಾರ್ಯಾಚರಣೆಗೆ ಸ್ವಲ್ಪ ಅಡ್ಡಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಅದೆಲ್ಲ ಸರಿ, ರಾತ್ರಿ 10ರ ನಂತರ ಪ್ರಯಾಣಿಕರು ಹಳೇ ಬಸ್ ನಿಲ್ದಾಣಕ್ಕೇ ಹೋಗಿ ಎಂದು ಸಾರಿಗೆ ಸಂಸ್ಥೆ ಏಕೆ ಮೊದಲೇ ತಿಳಿಸಲಿಲ್ಲ ಎಂಬ ಪ್ರಶ್ನೆ ಪ್ರಯಾಣಿಕರಿಂದ ಕೇಳಿಬರುತ್ತಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net