ಸಮಸ್ಯೆ ತಂದ 4 ತಾಸಿನ ಮಳೆ

2407Aland1 B
Published on

ಆಳಂದ: ಗಡಿ ತಾಲೂಕಿನಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಶುಕ್ರವಾರ ಸತತ 4 ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲ ಹಳ್ಳಿಗಳಲ್ಲಿ ಹೊಲಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಸಾಲೇಗಾಂವ, ನಿಂಬರ್ಗಾ , ಮಾದನಹಿಪ್ಪರಗಾ, ಖಜೂರಿ ವಲಯದಲ್ಲಿ ಅತ್ಯಧಿಕ ಮಳೆಯಾಗಿದೆ. ಸಾಲೇಗಾಂವ್ ಕರೆ ಮೈದುಂಬಿಕೊಂಡಿದ್ದು, ಮಾಡಿಯಾಳದಲ್ಲಿ ಸಣ್ಣ ಹಳ್ಳ ತುಂಬಿ ಹರಿಯುತ್ತಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಕೆಲಕಾಲ ನೀರಿನಲ್ಲೇ ಸಂಚರಿಸಬೇಕಾಯಿತು. ಇನ್ನು ಊರಿನ ಹನುಮಾನ ದೇವಸ್ಥಾನ ಸುತ್ತ ಜಲ ದಿಗ್ಬಂಧನ ಹೇರಿದೆ. ಎರಡ್ಮೂರು ಮನೆಗಳ ಗೋಡೆ ಕುಸಿದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.
ನಿಂಬರ್ಗಾ -ಗಾಣಗಾಪುರ ನಡುವಿನ ಸಣ್ಣ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸುತ್ತಲಿನ ಗ್ರಾಮಗಳ ಜಮೀನಿಗೆ ನೀರು ನುಗ್ಗಿದ್ದು, ಬೆಳೆ ಹಾನಿ ಸಂಭವಿಸಿದೆ. ಇನ್ನು ಕೆಲವೆಡೆ ನೀರಿನ ಸೆಳೆತಕ್ಕೆ ಹೊಲದ ಸುತ್ತ ಹಾಕಿದ್ದ ಒಡ್ಡುಗಳು ಕಿತ್ತು ಹೋಗಿವೆ.
ಮೋಘಾ(ಕೆ) ಹಳ್ಳದ ಬಳಿ ಮೇಯಲು ಹೋಗಿದ್ದ ಶ್ರೀಮಂತ ಘರ್ ಎಂಬುವವರಿಗೆ ಸೇರಿದ್ದ ಆಕಳು ಮತ್ತು ಕರು ಹಳ್ಳದಲ್ಲಿ ಕೊಚ್ಚಿ ಹೋಗಿವೆ. ಆಕಳು ಹೊರಗೆ ಬಂದಿದ್ದು, ಕರು ಮಾತ್ರ ಇದುವರೆಗೆ ಪತ್ತೆಯಾಗಿಲ್ಲ.

ಆಳಂದ ತಾಲೂಕಿನಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಮನೆಗಳು ಬಿದ್ದಿವೆ ಎಂದು ಹೇಳಲಾಗುತ್ತಿದೆ. ಹೊಲಗಳಿಗೂ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗುವುದು.
| ದಯಾನಂದ ಪಾಟೀಲ್, ತಹಸೀಲ್ದಾರ್ ಆಳಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net