

ಗೌರಿಬಿದನೂರು: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಮಾಡಲು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೂಚಿಸಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 22 ಗ್ರಾಮಗಳಲ್ಲಿ ನೀರಿನ ಕೊರತೆ ಇರುವ ಮಾಹಿತಿ ಇದೆ, ಈ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಂತೆ ತಾಕೀತು ಮಾಡಿದರು.ಅಂತರರ್ಜಲ ವೃದ್ಧಿಗೆ ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳಲು ರೈತರಿಗೆ ಅರಿವು ಮೂಡಿಸಬೇಕು ಜತೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 10 ಕೃಷಿ ಹೊಂಡ ನಿರ್ಮಿಸುವಂತೆ ಸೂಚಿಸಿದರು.
ಈ ಬಾರಿ ಉತ್ತಮ ಮಳೆಯಾಗುವ ಸಂಭವ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ, ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಕೃಷಿ ಕೇಂದ್ರಗಳಲ್ಲಿ ರಾಗಿ, ತೊಗರಿ, ಸಿರಿಧಾನ್ಯಗಳ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು ರಸಗೊಬ್ಬರ ಸಹ ಸಾಕಷ್ಟಿದೆ ಎಂದು ಕೃಷಿ ಅಧಿಕಾರಿ ಎಸ್.ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು.
ಕರೊನಾ ಸೋಂಕು ತಾಲೂಕಿನಲ್ಲಿ ನಿಯಂತ್ರಣದಲ್ಲಿದೆ, 130 ಮಂದಿ ಕ್ವಾರಂಟೈನ್‌ನಲ್ಲಿದ್ದು ಈ ಪೈಕಿ 77ಜನ ಗುಣಮುಖರಾಗುವುದು ಖಚಿತವಾಗಿದೆ. ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಅಯುಷ್ಮಾನ್ ಚೂರ್ಣ ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಒ.ರತ್ನಮ್ಮ ವಿವರಿಸಿದರು.ಇದೇ ವೇಳೆ ಆಶಾ ಕಾರ್ಯಕರ್ತರಿಗೆ ಅಯುಷ್ಮಾನ್ ಚೂರ್ಣ ನೀಡಲಾಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ಕುರಿತು ವಿವರಿಸಿದರು. ತಾಪಂ ಅಧ್ಯಕ್ಷ ಎಸ್.ಎಲ್.ಲೋಕೇಶ್, ಉಪಾಧ್ಯಕ್ಷೆ ಎ.ರತ್ನಮ್ಮ ಅಶ್ವತ್ಥನಾರಾಯಣಗೌಡ, ಇಒ ಎನ್. ಮುನಿರಾಜು, ತಾಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.