ಸಮಸಮಾಜಕ್ಕೆ ಮೌಲ್ಯಭರಿತ ಸಂದೇಶ ನೀಡಿದ ಕಲ್ಯಾಣ

23BK1
ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾನತಾ ಸಮಾವೇಶವನ್ನು ಸಚಿವ ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶ್ರೀ ಸಿದ್ಧರಾಮ ಬೆಲ್ದಾಳ ಶರಣರು, ಸಚಿವ ರಹೀಮ್‌ಖಾನ್, ಸಂಸದ ಸಾಗರ ಖಂಡ್ರೆ, ಶಾಸಕರಾದ ಶರಣು ಸಲಗರ, ಡಾ.ಸಿಲಿಂಗಪ್ಪ ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಮಾಲಾ ಬಿ.ನಾರಾಯಣರಾವ, ಧನರಾಜ ತಾಳಂಪಳ್ಳಿ, ಶ್ರೀಕಾಂತ ಸ್ವಾಮಿ, ಬಾಬು ಹೊನ್ನಾನಾಯಕ, ಮನೋಹರ ಮೈಸೆ, ದಿಗಂಬರ ಜಲ್ದೆ ಇತರರಿದ್ದರು.
Published on

ಬಸವಕಲ್ಯಾಣ: ಸಮ ಸಮಾಜ ನಿರ್ಮಾಣಕ್ಕಾಗಿ ವಚನ ಸಾಹಿತ್ಯದ ಮೂಲಕ ಮೌಲ್ಯಭರಿತ ಸಂದೇಶಗಳನ್ನು ಈ ನೆಲದ ಶರಣರು ಜಗತ್ತಿಗೆ ಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಬಸವ ಮಹಾಮನೆ ಟ್ರಸ್ಟ್​ನಿಂದ ಬಸವ ಮಹಾಮನೆ ಪರಿಸರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾನತಾ ಸಮಾವೇಶ ಉದ್ಘಾಟಿಸಿದ ಅವರು, ಸಮಾನತೆ ಪರಿಕಲ್ಪನೆಯೇ ರೋಮಾಂಚನಕಾರಿ. ಇತಿಹಾಸ ನೆನಪಿಸುವÀ ಮಹಾ ಸಮಾವೇಶ ಇಲ್ಲಿ ನಡೆಯುತ್ತಿದೆ. ಇತಿಹಾಸ ತಿಳಿದುಕೊಂಡರೆ ಮಾತ್ರ ಇತಿಹಾಸ ಬರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಲುಷಿತ ಮನಸ್ಸುಗಳು ಪರಿವರ್ತನೆ ಆಗದ ಹೊರತು ಸಮಸಮಾಜ ನಿರ್ಮಾಣವಾಗದು. ಗುರಿ ಮತ್ತು ಜವಾಬ್ದಾರಿಯನ್ನು ಸಂಘಟನಾತ್ಮಕ ಹೋರಾಟದ ಮೂಲಕ ಸಮಸಮಾಜ ನಿರ್ಮಾಣದ ಅಗತ್ಯವಿರುವುದನ್ನು ಮನಗಂಡು ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಸಮಾವೇಶ ಸಂಘಟಿಸಿದ್ದು, ಇದು ಚಳವಳಿಯಾಗಿ ಪರಿವರ್ತನೆಯಾಗಿ ಸಮಸಮಾಜ ನಿರ್ಮಾಣಕ್ಕೆ ಪ್ರೇರಣೆ ಆಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.

ಕ್ರಾಂತಿಭರಿತ ಸುಧಾರಣಾ ಮಾತುಗಳು ಸಾಕಷ್ಟು ಜನ ಆಡುತ್ತಾರೆ. ಆದರೆ ತತ್ವ ಹೇಳಿ ತದ್ವಿರುದ್ಧ ನಡೆದರೆ ಸಮಾನತೆ ಬರದು. ಬುದ್ಧರ ವಿಚಾರಗಳನ್ನು ಪ್ರಧಾನಿ ಅಮೆರಿಕದಲ್ಲಿ ಹೇಳುತ್ತಾರೆ. ಆದರೆ ಇಲ್ಲಿ ಸಂಘರ್ಷ ಆಗುತ್ತದೆ. ಧರ್ಮ-ಧರ್ಮದ ನಡುವೆ ವೈಷಮ್ಯ ಬೆಳೆಯುತ್ತಿವುದು ನಾಶವಾಗಬೇಕು ಎಂಬುದೇ ಬುದ್ಧನ ಸಂದೇಶ ಎಂದರು.

ಮನು ಧರ್ಮ ಶಾಸ್ತ್ರ ಈ ದೇಶದ ಮೂಲ ನಿವಾಸಿ, ಶೋಷಿತರು, ಎಲ್ಲ ಜಾತಿಯ ಸ್ತ್ರೀಯರಿಗೆ ಸಮಾನತೆ ಆವಕಾಶ ಕೊಡುವುದಿಲ್ಲ. ಹೀಗಾಗಿ ಡಾ.ಅಂಬೇಡ್ಕರ್ ಮನುಧರ್ಮ ಶಾಸ್ತ್ರ ಸುಟ್ಟಿದ್ದರು. ಇದು ಅರ್ಥ ಆಗದಿದ್ದರೆ ಸಮಸಮಾಜ ಪ್ರಯತ್ನಗಳಿಗೆ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಸಮಾವೇಶದ ಆಶಯ ತಿಳಿಸಿದರು. ಬೆಂಗಳೂರಿನ ಶ್ರೀ ಚನ್ನಬಸವಾಂದ ಸ್ವಾಮೀಜಿ, ಆಣದೂರದ ಭಂತೆ ಧಮ್ಮಾನಂದಜಿ, ಪ್ರಭು ಶ್ರೀತಾಯಿ, ಪಾಸ್ಟರ್ ಇಮಾನ್ಯುವೆಲ್ ಮಾತನಾಡಿದರು.

ಖಾನಾಪುರದ ಶ್ರೀ ಮಹಾಯೋಗಿ ಪೂಜ್ಯ ಜಗದೀಶ್ವರಿ ಮಾತಾ ಮಲಗಿ, ಮನಗೂಳಿಯ ಶ್ರೀ ವೀರತಿಶಾನಂದ ಸ್ವಾಮೀಜಿ, ಬೀದರ್‌ನ ಮೌಲಾನಾ ಮಹ್ಮದ್ ತಾಸಾದ್ದುಕ್ ನಾದ್ವಿ, ಬೀದರ್‌ನ ಗ್ಯಾನಿ ಬಲಬೀರಸಿಂಗ್‌ಜಿ, ಯೋಗಗುರು ಶ್ರೀ ಚನ್ನಬಸವಣ್ಣ ಸಾನ್ನಿಧ್ಯ, ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು.

ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ ಖಂಡ್ರೆ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ರಾಜಶೇಖರ ಪಾಟೀಲ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಮಾಜಿ ಎಂಎಲ್‌ಸಿ ವಿಜಯಸಿಂಗ್, ಮುಖಂಡ ಧನರಾಜ ತಾಳಂಪಳ್ಳಿ, ಕೆಎನ್‌ಎನ್‌ಎಲ್ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಪ್ರಮುಖರಾದ ದಿಲೀಪ ಸಿಂಧೆ, ಬಾಬು ಹೊನ್ನಾನಾಯಕ, ರವೀಂದ್ರ ಗಾಯಕವಾಡ, ಅರ್ಜುನ ಕನಕ, ರವೀಂದ್ರಕುಮಾರ ಬೋರಾಳೆ, ಜಗನ್ನಾಥ ಜಮಾದಾರ, ಅಬ್ದುಲ್ ಮನ್ನಾನ್ ಸೇಠ, ಲಕ್ಷ್ಮಣ ದಸ್ತಿ, ಮನೋಹರ ಮೈಸೆ, ವಿದ್ಯಾಸಾಗರ ಶಿಂಧೆ, ರಾಜಶ್ರೀ ಸ್ವಾಮಿ, ಗೀತಾ ಚಿದ್ರಿ, ವಿಶ್ವನಾಥ ಮೋರೆ, ಮಹಾಂತಪ್ಪ ಬಿಜನಳ್ಳಿ, ದಿಗಂಬರ ಜಲ್ದೆ, ಪಿಂಟು ಕಾಂಬಳೆ, ಸಿಕಂದರ ಶಿಂಧೆ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಇತರರಿದ್ದರು.

ಕರ್ನಾಟಕ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಎಸ್.ಎಂ. ಭಕ್ತಕುಂಬಾರ ನಿರೂಪಣೆ ಮಾಡಿದರು.

ಡಾ.ಖದೀರ್‌ಗೆ ಸೌಹಾರ್ದ ರತ್ನ ಪುರಸ್ಕಾರ: ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರಿಗೆ ಸೌಹಾರ್ದ ರತ್ನ ಪುರಸ್ಕಾರ ಪ್ರದಾನ ಜತೆಗೆ ವಿವಿಧ ಕ್ಷೇತ್ರದ ಸಾಧನರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾನತೆ ಬರುವಂಥ ವ್ಯವಸ್ಥೆಯಾಗಲಿ: ಸಮಾನತೆ ನನ್ನ ಉಸಿರು. ಸಮಾಜ, ದೇಶದಲ್ಲಿ ಸಮಾನತೆ ಬರುವ ವ್ಯವಸ್ಥೆ ಆಗಬೇಕು. ಭಾರತೀಯರೆಲ್ಲರೂ ಒಂದು ಎಂಬ ಭಾವ ಎಲ್ಲರಲ್ಲಿ ಬೆಳೆಯಬೇಕು. ಇದೇ ಸಮಾವೇಶದ ಆಶಯ ಎಂದು ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು. ಒಂದು ಕಡೆ ಗಗನಚುಂಬಿ ಕಟ್ಟಡ, ಇನ್ನೊಂದೆಡೆ ತಾಡಪತ್ರಿ, ಗುಡಿಸಲುಗಳಿವೆ. ಉಳ್ಳವರ ಮಕ್ಕಳು ಕಾನ್ವೆಂಟ್ ಸ್ಕೂಲ್‌ನಲ್ಲಿ ಉತ್ತಮ ಶಿಕ್ಷಣ ಪಡೆದರೆ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಇಲ್ಲವಾಗಿದೆ. ಸ್ತ್ರೀ -ಪುರುಷರ ನಡುವಿನ ಭೇದಭಾವ ಹೋಗಬೇಕು. ಎಲ್ಲರೂ ನಮ್ಮವರು ಎನ್ನುವ ಮನೋಭಾವ ಆಳುವ ವರ್ಗ, ರಾಜಕೀಯ ನಾಯಕರು, ಆಧಿಕಾರಿಗಳಲ್ಲಿ ಬರಬೇಕು ಎಂದು ಆಶಿಸಿದರು. ಬಿಕೆಡಿಬಿ ಮತ್ತು ಅನುಭವ ಮಂಟಪ ನನ್ನ ಸಂಕಲ್ಪ ಮತ್ತು ಕನಸು. ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಮನವಿ ಮಾಡಿದ್ದೆ. ಈ ಭಾಗದ ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಬಸವ ಮಹಾಮನೆ ಪರಿಸರದಲ್ಲಿ ಯೋಗ ಕೇಂದ್ರ ಸ್ಥಾಪನೆಗೆ ೫ ಕೋಟಿ ಅನುದಾನಕ್ಕೆ ಮನವಿಪತ್ರ ಸಲ್ಲಿಸಿದ್ದು, ಭೂಮಿಪೂಜೆ ನೆರವೇರಿಸಲಾಗಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಹೀಗೇಕೆ ಎಂದು ವ್ಯವಸ್ಥೆಯನ್ನು ಪ್ರಶ್ನಿಸಿದರು.

ಬಿಕೆಡಿಬಿ ರಚನೆ ಆಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಮಾಜಿ ಸಚಿವ ಬಸವರಾಜ ಪಾಟೀಲ್, ಹಿರಿಯರಾದ ಭೀಮಣ್ಣ ಖಂಡ್ರೆ ಹಾಗೂ ಪ್ರಮುಖರ ಪ್ರಯತ್ನ ಇದಕ್ಕೆ ಕಾರಣ. ಇಲ್ಲಿ ಪೂಜ್ಯರ (ಬೆಲ್ದಾಳ ಶರಣರ) ಸಲಹೆ, ಒತ್ತಾಯ ಮುಖ್ಯ. ನಂತರ ಮಾಜಿ ಸಿಎಂ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಪ್ರೇರಣೆ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಕೊಡುಗೆ ಇದೆ.

| ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net