

ಮೈಸೂರು: ಎನ್‌ಎಸ್‌ಎಸ್ ಮೂಲಕ ವಿದ್ಯಾರ್ಥಿಗಳು ದೇಶಕ್ಕಾಗಿ ಏನಾದರೂ ಕೊಡುಗೆ ನೀಡುತ್ತೇನೆಂಬ ಸಮರ್ಪಣಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಸಲಹೆ ನೀಡಿದರು.
ಮೈವಿವಿ ರಾಷ್ಟ್ರೀಯ ಸೇವಾ ಯೋಜನೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ನಗರದ ಎನ್‌ಎಸ್‌ಎಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಏಳು ದಿನಗಳ ರಾಷ್ಟ್ರ ಮಟ್ಟದ ಭಾವೈಕ್ಯತಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಅವರ ವಿಚಾರವನ್ನು ಅರಿಯಲು ಇಂತಹ ಶಿಬಿರ ಅಗತ್ಯ. ವಿವಿಧ ರಾಜ್ಯಗಳಿಂದ ಆಗಮಿಸಿ ಒಂದು ವಾರಗಳ ಕಾಲ ಶಿಬಿರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ಪಡೆದುಕೊಳ್ಳಲು ನೆರವಾಗಿದೆ. ಕಲಿತ ವಿಚಾರಗಳನ್ನು ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ನಾನು ಕನ್ನಡಿಗ, ಮರಾಠ, ತಮಿಳಿಗ ಎನ್ನುವ ಭಾವನೆಯನ್ನು ಬಿಟ್ಟು ನಾನು ಭಾರತೀಯ ಎಂಬ ರಾಷ್ಟ್ರಾಭಿಮಾನದಿಂದ ವಿದ್ಯಾರ್ಥಿಗಳು ಬದುಕಬೇಕು. ಮೊದಲು ದೇಶ ಎಂಬುದು ಯಾವಾಗಲೂ ನಮ್ಮ ಮನದಲ್ಲಿರಬೇಕು ಎಂದು ಕಿವಿಮಾತು ಹೇಳಿದರು.
ಭಾರತದ ನೆರೆ, ಹೊರೆಯ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟು, ಪ್ರಾಕೃತಿಕ ವಿಕೋಪದಂತಹ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಭಾರತದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಎದುರಾದರೂ ಚಾಣಾಕ್ಷತನದಿಂದ ಪರಿಸ್ಥಿತಿ ನಿಭಾಯಿಸುತ್ತಿದೆ. ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ಪರಿಹಾರಕ್ಕೂ ಮುಂದಾಗಿದೆ ಎಂದು ಹೇಳಿದರು.
ಆಂಧ್ರಪ್ರದೇಶದ ಎನ್‌ಎಸ್‌ಎಎಸ್ ಸಂಯೋಜಕಿ ಕೆ.ಅಪರ್ಣಾ ಮಾತನಾಡಿ, ವ್ಯಕ್ತಿತ್ವ ವಿಕಾಸನ, ನಾಯಕತ್ವ ಗುಣ ಬೆಳವಣಿಗೆಗೆ ಎನ್‌ಎಸ್‌ಎಸ್ ಸಹಾಯಕಾರಿಯಾಗಿದೆ. ದೇಶದ ಹಿತಕ್ಕಾಗಿ ಐಕ್ಯತೆಯಿಂದ ಬದುಕಬೇಕು ಎನ್ನುವ ಬದ್ಧತೆ ಕಲಿಸುತ್ತದೆ. ಎನ್‌ಎಸ್‌ಎಸ್‌ನಿಂದ ಗಾಂಧೀಜಿ ಚಿಂತನೆಗಳನ್ನು ನಿಜವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಉತ್ತಮ ನಾಗರಿಕನಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ತಮಿಳುನಾಡಿನ ಶಿಬಿರಾರ್ಥಿ ಹರಿನಿಧಿ ಮಾತನಾಡಿ, ಎನ್‌ಎಸ್‌ಎಸ್ ಶಿಸ್ತು ಮತ್ತು ಸಂಯಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಬಹು ಸಂಸ್ಕೃತಿ ಮತ್ತು ಬಹು ಧರ್ಮಿಯ ಜನರ ನಡುವೆ ಐಕ್ಯತೆಯಿಂದ ಬದುಕುವುದು ಹೇಗೆ ಎಂದು ಕಲಿಸುತ್ತದೆ ಎಂದರು.
ಬೆಂಗಳೂರು ಗಾಂಧಿ ಭವನದ ಅಧ್ಯಕ್ಷ ಪ್ರೊ.ಜಿ.ಬಿ ಶಿವರಾಜ್, ಮೈಸೂರು ವಿಶ್ವವಿದ್ಯಾಲಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿಗಳಾದ ಡಾ.ಎಂ.ಬಿ.ಸುರೇಶ್, ಡಾ.ಬಿ.ಚಂದ್ರಶೇಖರ್, ಬಿ.ಕೆ ಜಗದೀಶ್, ಪ್ರೊ.ಕಾಳಚನ್ನೇಗೌಡ, ಪ್ರೊ.ಕೆ.ಟಿ.ವೀರಪ್ಪ, ಕಾರಿಯಪ್ಪ ಇತರರು ಹಾಜರಿದ್ದರು.