

ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್, ಮುಳಸಾವಳಗಿ, ಚಿಕ್ಕರೂಗಿ, ಚಟ್ಟರಕಿ ಗ್ರಾಮಗಳ ರೈತರ ಜಮೀನುಗಳ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ 33ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಶುಕ್ರವಾರ ಆಗಮಿಸಿದ ರೈತರು ಸರಿಯಾಗಿ ದಿನಕ್ಕೆ ಐದು ತಾಸು ವಿದ್ಯುತ್ ಒದಗಿಸದಿರುವ ಹೆಸ್ಕಾಂ ಸಿಬ್ಬಂದಿ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ಕಳೆದ ಒಂದು ತಿಂಗಳಿಂದ ರೈತರ ಜಮೀನುಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಸತತ ವಿದ್ಯುತ್ ಒದಗಿಸಲು ವಿಫಲರಾಗಿದ್ದಾರೆ. ಈಗ ವಿದ್ಯುತ್ ಬಂದಿದೆ ಎನ್ನುವಾಗಲೇ ಮತ್ತೆ ಹೋಗಿರುತ್ತದೆ. ಹೀಗಾದರೇ ರೈತರು ಏನು ಮಾಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಗ್ರಾಮಸ್ಥರ ಪ್ರತಿಭಟನೆಗೆ ವಿಷಯ ತಿಳಿದ ಇಂಡಿ ಹೆಸ್ಕಾಂ ಕಚೇರಿಯ ಇಇ ಎಸ್.ಎ. ಬಿರಾದಾರ, ದೇವರಹಿಪ್ಪರಗಿ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ್ ಸ್ಥಳಕ್ಕೆ ಆಗಮಿಸಿ, ರೈತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು ಉತ್ಪಾದನೆ ಕಡಿಮೆಯಾಗಿದೆ. ಜತೆಗೆ ಮಳೆಯ ಅಭಾವವೂ ಆಗಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಸಲಾಗುವುದು. ರೈತರು ಸಹಕರಿಸಬೇಕು ಎಂದರು.
ಸಾಯಿಕುಮಾರ ಬಿಸನಾಳ, ವಿದ್ಯಾಧರ ಸಂಗೋಗಿ, ಪಿಡ್ಡಪ್ಪ ಗಣಜಲಿ, ಮಹಾದೇವಪ್ಪ ಹಳ್ಳಿ, ಸದಾಶಿವ ಜಂಬಗಿ, ಬಸಣ್ಣ ಸೂಳಿಭಾವಿ, ಸಾಹೇಬಗೌಡ ರೆಡ್ಡಿ, ಮಲ್ಲು ಕಬಾಡಗಿ, ರೇವಣಸಿದ್ಧ ಕಬಾಡಗಿ, ಸೋಮಲಿಂಗ ಗಣಜಲಿ, ತಮ್ಮಣ್ಣ ಗಣಜಲಿ, ಮಲ್ಲಿನಾಥ ಕಬಾಡಗಿ, ಸುರೇಶ ಕಬಾಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿದ್ದರು.