ಸಮರ್ಪಕ ವಿದ್ಯುತ್ ಪೂರೈಸಿ

Supply adequate power
ರೈತರ ಜಮೀನಿಗೆ ಸಮರ್ಪಕವಾಗಿ ವಿದ್ಯುತ್ ನೀಡದಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ನಿಂಗರಾಜ ಆಲೂರ, ಸೀತಪ್ಪ ಗಣಿ, ಬಸವರಾಜ ಬಾಗೇವಾಡಿ, ರವಿಶಂಕರ ಕೋತಿನ, ವಿಠ್ಠಲ್ ಉಪ್ಪಾರ, ವೆಂಕಟೇಶ ವಡ್ಡರ, ಸಾಬಣ್ಣ ಅಂಗಡಿ ಇತರರಿದ್ದರು.
Published on

ನಿಡಗುಂದಿ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದ್ದು, ಜಮೀನುಗಳಿಗೆ ನೀರು ಕಟ್ಟಲಾಗದೇ ರೈತರು ಕಂಗಾಲಾಗಿದ್ದಾರೆ. ಒಂದೆಡೆ ಮುಂಗಾರು ಕೈಕೊಟ್ಟದ್ದು, ಸದ್ಯ ಭರ್ತಿಯಾದ ಜಲಾಶಯ ನೀರು ಬಳಸಬೇಕೆಂದರೆ, ಸಮರ್ಪಕ ವಿದ್ಯುತ್ ಪೂರೈಸದ ಕಾರಣ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಹೆಸ್ಕಾಂ ಎಂಡಿಗೆ ಮನವಿ ಸಲ್ಲಿಸಿದರು.

ಮೊದಲು 3ಫೇಸ್ ಹಗಲು 4ತಾಸು, ರಾತ್ರಿ 3ತಾಸು ವಿದ್ಯುತ್ ಕೊಡಲಾಗುತ್ತಿತ್ತು. ಸದ್ಯ ಅದನ್ನು ಬಂದ್ ಮಾಡಿ, ಒಂದರಿಂದ ಎರಡು ತಾಸು ಮಾತ್ರ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಹೊತ್ತು ಗೊತ್ತಿಲ್ಲದೇ ಜಮೀನಿಗೆ ಹೋಗಿ ನೀರು ಕಟ್ಟುವ ಪರಿಸ್ಥಿತಿ ಎದುರಾಗಿದೆ. ಪಂಪಸೆಟ್ ಹೊಂದಿರುವ ರೈತರು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತಿದ್ದಾರೆ. ಯಾವುದೋ ಒಂದು ಗಳಿಗೆಯಲ್ಲಿ 1 ತಾಸು ವಿದ್ಯುತ್ ಪೂರೈಕೆಯಾದರೆ, ನಂತರ ನಿಲುಗಡೆಯಾಗುತ್ತದೆ. ಹೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದರೆ, ಲೋಡ್ ಸೆಡ್ಡಿಂಗ್ ಎನ್ನುವ ಕಾರಣ ನೀಡುತ್ತಾರೆ. ವಿದ್ಯುತ್ ಪೂರೈಕೆಯಲ್ಲಿ ಹೆಚ್ಚು ಕಡಿಮೆಯಾಗಿ ಪಂಪಸೆಟ್‌ಗಳು ದುರಸ್ತಿಗೆ ಬರುತ್ತಿವೆ. ಕಾಲುವೆ ನೀರು ಹಾಗೂ ಬೋರ್ ನೀರು ನಂಬಿದ ರೈತರಿಗೆ ಸರಿಯಾಗಿ ವಿದ್ಯುತ್ ನೀಡದ ಕಾರಣ ಬೆಳೆಗೆ ನೀರು ಹರಿಸಲು ತೀವ್ರ ತೊಂದರೆಯಾಗುತ್ತಿದೆ. ನೀರಿಲ್ಲದೇ ಬೆಳೆಗಳು ಒಣಗುವ ಸ್ಥಿತಿಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರೈತರ ಜಮೀನಿಗೆ ಸಮರ್ಪಕ ವಿದ್ಯುತ್ ನೀಡಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರೈತಸಂಘ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ, ತಾಲೂಕಾಧ್ಯಕ್ಷ ಸೀತಪ್ಪ ಗಣಿ, ರೈತ ಮುಖಂಡರಾದ ಬಸವರಾಜ ಬಾಗೇವಾಡಿ, ರವಿಶಂಕರ ಕೋತಿನ, ವಿಠ್ಠಲ್ ಉಪ್ಪಾರ, ವೆಂಕಟೇಶ ವಡ್ಡರ, ಸಾಬಣ್ಣ ಅಂಗಡಿ, ಪೀರಸಾಬ ನದಾಫ್, ಸುಭಾಷ ಚೋಪಡೆ, ಮಲ್ಲಯ್ಯ ನಾಗನೂರಮಠ, ಮಾಧುರಾಯ್ ಪಾಟೀಲ, ಸಂಜಯ ಚನಗೊಂಡ, ತಿಪ್ಪಣ್ಣ ಕೊಳ್ಳಾರ, ಸಾಬಣ್ಣ ಮಾದರ, ಪಾರ್ವತಿ ಲಮಾಣಿ, ಶಶಿಕಲಾ ಧರ್ಮರ, ರತ್ನಾಬಾಯಿ ಚವ್ಹಾಣ, ಶಾಂತಾ ಮಡಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net