

ಸಿಂದಗಿ: ಕಳೆದ ಎರಡು ತಿಂಗಳಿನಿಂದ ಲೋಡ್ ಶೆಡ್ಡಿಂಗ್ ನೆಪದಲ್ಲಿ ಬೇಕಾಬಿಟ್ಟಿ ವಿದ್ಯುತ್ ಪೂರೈಕೆಗೆ ಬೇಸತ್ತು ತಾಲೂಕಿನ ಕಣ್ಣಗುಡ್ಡಿಹಾಳ, ಹಡಗಿನಾಳ ಹಾಗೂ ಗುಬ್ಬೇವಾಡ ಗ್ರಾಮದ ನೂರಾರು ರೈತರು ವಿದ್ಯುತ್ ಇಲಾಖೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಈ ವೇಳೆ ರೈತ ಬಾಪುಗೌಡ ಪಾಟೀಲ ಹಾಗೂ ಇತರ ಗ್ರಾಮದ ರೈತರು ಮಾತನಾಡಿ, ಸರ್ಕಾರದ ಬಿಟ್ಟಿ ಉಚಿತ ಯೋಜನೆಗಳ ಬಿಡೆ ಬೇಡ. ನಮಗೆ ನೀಡುವ ವಿದ್ಯುತ್ ದರವನ್ನು ಸಹ ನಮ್ಮಿಂದ ಇಲಾಖೆ ಭರಿಸಿಕೊಳ್ಳಲಿ, ಅಗತ್ಯವಿದ್ದಷ್ಟು ವಿದ್ಯುತ್ ರೈತನ ಪಂಪಸೆಟ್‌ಗೆ ಒದಗಿಸುವ ಕೆಲಸ ಮಾಡಲಿ. ನಮಗೆ ಅಗತ್ಯವಿದ್ದಷ್ಟು ವಿದ್ಯುತ್ ಕೊಡಲಿ ಎಂದು ಸರ್ಕಾರದ ಹಾಗೂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಮಳೆ ಕಡಿಮೆ, ಇನ್ನೊಂದೆಡೆ ನಮ್ಮ ಜಮೀನಿನ ಪಂಪಸೆಟ್ಟುಗಳಿಗೆ ಕಡಿಮೆ ಸಾಮರ್ಥ್ಯದ ವಿದ್ಯುತ್ ಪೂರೈಕೆಯಿಂದಾಗಿ ಮೋಟರ್‌ಗಳು ಹಾನಿಗೀಡಾಗುತ್ತಿವೆ. ಒಮ್ಮೆ ರಾತ್ರಿ ಹಾಗೂ ಇನ್ನೊಮ್ಮೆ ಹಗಲು ಕೇವಲ 1 ಅಥವಾ 2 ತಾಸು ವಿದ್ಯುತ್ ನೀಡುತ್ತಿದ್ದು, ಬೋರವೆಲ್ ಹಾಗೂ ಬಾವಿಗಳನ್ನು ನೆಚ್ಚಿಕೊಂಡಿರುವ ನಮ್ಮ ಬೆಳೆಗಳು ಒಣಗಿ ಹೋಗುತ್ತಿವೆ. ಈ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಶಾಸಕರ ಗಮನಕ್ಕೂ ತಂದಿದ್ದೇವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪಕ್ಕದ ಹಳ್ಳಿಯಲ್ಲಿನ ವಿದ್ಯುತ್ ಸಾಮರ್ಥ್ಯ ಸರಿಯಾಗಿರುತ್ತದೆ. ಆದರೆ ನಮ್ಮೆಲ್ಲ ಗ್ರಾಮಗಳಲ್ಲಿ ಪೂರೈಸುವ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಇದಕ್ಕೆ ಯಾರು ಹೊಣೆ. ನಮ್ಮೆಲ್ಲರಿಗೂ ಇದೇ ಸಮಸ್ಯೆ. ಇದು ಹೀಗೆ ಮುಂದುವರೆದರೆ ನಮ್ಮೆಲ್ಲರ ಸಾವಿಗೆ ವಿದ್ಯುತ್ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬೊಬ್ಬೆಯಿಟ್ಟರು. ನಂತರ ಕೂಡಲೇ ನಮ್ಮ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಶಾಂತಪ್ಪ ಕಾರಿಮನಿ, ಬಿಳಿಯಾನಿ ಸಿದ್ಧ, ಬಸವರಾಜ ಬಿರಾದಾರ, ಮಡಿವಾಳಪ್ಪ ಮಳ್ಳಿ, ಮಡಿವಾಳಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಸೈಪನಸಾಬ ವಾಲಿಕಾರ ಗ್ರಾಮಸ್ಥರಿದ್ದರು.