

ಮದ್ದೂರು: ಎರಡು ತಿಂಗಳಿಂದಲೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಬೋರಾಪುರ, ಚಾಮನಹಳ್ಳಿ, ಹುಲಿಗೆರೆಪುರ ಗ್ರಾಮಸ್ಥರು ಸೆಸ್ಕ್ ಕಚೇರಿಗೆ ಬುಧವಾರ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಸೆಸ್ಕ್ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾನಿರತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ 7 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು.
ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಎರಡು ತಿಂಗಳಿಂದಲೂ 7 ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಬದಲು 5 ಗಂಟೆ ನೀಡಲಾಗುತ್ತಿದೆ. ಇದರಿಂದಾಗಿ ಜಮೀನುಗಳಲ್ಲಿ ಬೆಳೆದು ನಿಂತಿರುವ ರಾಗಿ, ಕಬ್ಬು, ತೆಂಗು ರೇಷ್ಮೆ ಬೆಳೆಗಳು ಒಣಗುವ ಜತೆಗೆ ಅಧಿಕ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ದೂರಿದರು.
ಈ ನಡುವೆ ರೈತರು ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಕಂಡುಬಂದಿದ್ದು, ಕೂಡಲೇ ಹಗಲು ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು. ಈ ಸಂಬಂಧ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೂ ತಂದರೂ ಈವರೆಗೂ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಇಇ ರಮೇಶ್, ವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ವಿಳಂಬವಾಗಿದೆ. ಮನವಿ ಪತ್ರವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯವಾಯಿತು.
ಸ್ಥಳೀಯ ಮುಖಂಡರಾದ ಚಾಮನಹಳ್ಳಿ ರಾಮಯ್ಯ, ನಾಗರಾಜು, ದಿನೇಶ್, ಪುಟ್ಟಸ್ವಾಮಿ, ಕುಮಾರ್, ಪುನೀತ್, ನಿಂಗರಾಜು, ಸಿದ್ದರಾಜು, ಯೋಗೇಶ್, ಮಹದೇವು ಇತರರು ಇದ್ದರು.