

ನರಗುಂದ: ತಾಲೂಕಿನಾದ್ಯಂತ ಮತ್ತೆ ಕೃತಕ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ಕೊಣ್ಣೂರ ಗ್ರಾಮದ ರೈತರು ಶುಕ್ರವಾರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.
ಪ್ರವಾಹದ ಸಂಕಷ್ಟದಲ್ಲಿರುವ ಕೊಣ್ಣೂರ ಭಾಗದ ರೈತರು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಸರು, ಗೋವಿನಜೋಳ, ಹತ್ತಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಪ್ರಮುಖ ಬೆಳೆ ಬೆಳೆದಿದ್ದಾರೆ. ಕೆಲ ರೈತರ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನುಳಿದ ಕೆಲ ರೈತರ ಬೆಳೆಗಳು ನಿರಂತರ ಮಳೆಯಿಂದಾಗಿ ರೋಗಕ್ಕೆ ತುತ್ತಾಗುತ್ತಿವೆ. ಇದೀಗ ಸೂಕ್ತ ಸಮಯಕ್ಕೆ ಸಮರ್ಪಕ ಯೂರಿಯಾ ರಸಗೊಬ್ಬರ ಸಿಗದಿದ್ದರೆ ಬೆಳೆಗಳು ಸಂಪೂರ್ಣವಾಗಿ ಹಾಳಾಗುವ ಭೀತಿ ರೈತರಲ್ಲಿದೆ.
ಹೀಗಾಗಿ ಯೂರಿಯಾ ಪಡೆಯಲು ರೈತರು ಸಹಕಾರಿ ಸಂಘಗಳಿಗೆ ಮುಗಿಬೀಳುವಂತಾಗಿದೆ. ಕೊಣ್ಣೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಶುಕ್ರವಾರ ಒಂದು ಲೋಡ್ ಯೂರಿಯಾ ಬಂದಿದೆ. ಸಂಘದಲ್ಲಿ ಖಾತೆ ಹೊಂದಿರುವ ಓರ್ವ ರೈತರಿಗೆ ತಲಾ ಎರಡು ಚೀಲದಂತೆ ಗೊಬ್ಬರ ವಿತರಿಸಲಾಗುತ್ತಿದೆ. ಒಂದು ವೇಳೆ ಸಹಕಾರಿ ಸಂಘದಲ್ಲಿ ಖಾತೆ ಹೊಂದಿರದ ಅಥವಾ ಖಾತೆ ಇದ್ದರೂ, ಚಾಲ್ತಿಯಲ್ಲಿರದ ರೈತರಿಗೆ ಯಾವುದೇ ರಸಗೊಬ್ಬರ ಪೂರೈಕೆ ಮಾಡುವುದಿಲ್ಲ ಎಂದು ಕೃಷಿ ಪತ್ತಿನ ಸಹಕಾರಿ ಸಂಘದವರು ಹೇಳುತ್ತಿದ್ದಾರೆ. ಇದರಿಂದ ಕಂಗಾಲಾದ ರೈತರು ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ಮುಳ್ಳಿನ ಕಂಟಿಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ನೂರಾರು ಲಾರಿಗಳು ರಸ್ತೆಯುದ್ದಕ್ಕೂ ನಿಂತು ವಾಹನ ಸವಾರರು ಪರದಾಡುವಂತಾಯಿತು.
ಪ್ರತಿಭಟನೆ ಸ್ಥಳಕ್ಕಾಗಮಿಸಿದ ಪೊಲೀಸರು, ಸಂಘದ ಕಾರ್ಯದರ್ಶಿ ಬಿ.ಎಂ. ಬಂಧೋಜಿ ಹಾಗೂ ಸರ್ವ ಸದಸ್ಯರು ಎಲ್ಲ ರೈತರಿಗೂ ತಲಾ ಎರಡೆರಡು ಚೀಲ ಯೂರಿಯಾ ಗೊಬ್ಬರ ಪೂರೈಸುವ ಭರವಸೆ ನೀಡಿದರು ಬಳಿಕವೇ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಅಪ್ಪಣಗೌಡ ಅರ್ಭಾಣದ, ಬಸಯ್ಯಾ ಶಿವಪ್ಪಯ್ಯನಮಠ, ರಮಜಾನಸಾಬ್ ಸುರಕೋಡ, ಪ್ರಕಾಶ ಶಿರಿಯಪ್ಪಗೌಡ್ರ, ಬಸವರಾಜ ಪರಪ್ಪನವರ, ವರ್ಧಮಾನ ಭೋಗಾರ, ಶ್ರೀಶೈಲ ಪರಪ್ಪನವರ, ಭೀಮಸಿ ಪೂಜಾರ, ಇತರರಿದ್ದರು.