ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲ

smart health care
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸ್ಮಾರ್ಟ್​ಸಿಟಿ ಅನುದಾನದಲ್ಲಿ ಇಲ್ಲಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಲಾದ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆ ಮೂಲೆಗುಂಪಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ರಚಿಸಲಾದ ಹು-ಧಾ ಮಹಾನಗರ ಪಾಲಿಕೆಯ ಸದನ ಸಮಿತಿಯು ಶುಕ್ರವಾರ ಪರಿಶೀಲನೆ ನಡೆಸಿತು. ಈ ವೇಳೆ ಸಮರ್ಪಕ ಉತ್ತರ ನೀಡುವಲ್ಲಿ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಅಧಿಕಾರಿಗಳು ವಿಫಲರಾದರು.

3.26 ಕೋಟಿ ರೂ. ವೆಚ್ಚದ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆದಿದೆಯೆಂಬ ಆರೋಪ ಕೇಳಿ ಬಂದಿರುವುದರಿಂದ ಪಾಲಿಕೆ ಸಭಾ ನಾಯಕ ವೀರಣ್ಣ ಸವಡಿ ಅಧ್ಯಕ್ಷತೆಯಲ್ಲಿ ತಿಂಗಳ ಹಿಂದೆ ಸದನ ಸಮಿತಿ ರಚಿಸಲಾಗಿತ್ತು. ಅವರ ಅಧ್ಯಕ್ಷತೆಯಲ್ಲಿ ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಇಂದು ಮೊದಲ ಸಭೆ ನಡೆಸಿ ಬಳಿಕ ಸದನ ಸಮಿತಿ ಸದಸ್ಯರು ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡಿದರು.

ಈ ವೇಳೆ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ಗಮನ ಬಂದಿತು. ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ವೈದ್ಯರು ನೀಡುವ ಔಷಧಿ ಚೀಟಿಯ ಬಾರ್ ಕೋಡ್ ಸ್ಕ್ಯಾನ್ ಮಾಡಿದರೆ ಔಷಧಿ, ಮಾತ್ರೆಗಳನ್ನು ಹೊರ ಹಾಕುವ (ಯಾಂತ್ರಿಕವಾಗಿ) ವ್ಯವಸ್ಥೆಯೇ ಸ್ಮಾರ್ಟ್ ಹೆಲ್ತ್ ಕೇರ್. ಆದರೆ, ಇಂದು ಪರಿಶೀಲನೆ ವೇಳೆ ಬಾರ್ ಕೋಡ್ ಸ್ಕ್ಯಾನ್ ಮಾಡಿದರೆ ಯಾವುದೇ ಪ್ರಕ್ರಿಯೆ ಕಂಡು ಬರಲಿಲ್ಲ. ಬಾರ್ ಕೋಡ್ ಸಂಕೇತ ತಪ್ಪಿದೆ, ತಜ್ಞರಿಗೆ ಹೇಳಿದ್ದೇವೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಉತ್ತರಿಸಿದರು. ಹಾಗಾದರೆ, ಇಲ್ಲಿಯವರೆಗಿನ ಕಾರ್ಯಾಚರಣೆಯ ದತ್ತಾಂಶಗಳ ಬಗ್ಗೆ ದಾಖಲೆಗಳನ್ನು ಕೇಳಿದರೂ ಸ್ಪಷ್ಟ ಉತ್ತರ ನೀಡಲಿಲ್ಲ.

ಇಂಥದೊಂದು ವ್ಯವಸ್ಥೆ ಜಾರಿಗೆ ಪೂರ್ವ ವೈದ್ಯಕೀಯ ತಂಡದ ಸಲಹೆ ಪಡೆಯಲಾಗಿತ್ತೇ ? ಇದಕ್ಕೆ ಅನುಮೋದನೆ ನೀಡುವ ಸಂಬಂಧ ಸಭೆಯ ನಡಾವಳಿಗಳು ಏನಾದರೂ ಇದೇಯಾ ? ಟೆಂಡರ್ ಪ್ರಕ್ರಿಯೆ ಯಾವಾಗ ಮತ್ತು ಹೇಗೆ ನಡೆದಿತ್ತು? ಟೆಂಡರ್ ಪ್ರಕ್ರಿಯೆಯಲ್ಲಿ ಯಾರ್ಯಾರೂ ಭಾಗವಹಿಸಿದ್ದರು ? ಎಂಬಿತ್ಯಾದಿ ಪ್ರಶ್ನೆಗಳನ್ನು ಸದನ ಸಮಿತಿ ಕೇಳಿತು.

2019ರಲ್ಲಿ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದ್ದೇವೆ. ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಗತ್ಯ ದಾಖಲೆಗಳನ್ನು ನೀಡುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಒಂದು ವಾರದೊಳಗೆ ವರದಿ ಸಲ್ಲಿಸಲಾಗುವುದು ಎಂದು ಸದನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ತಿಳಿಸಿದ್ದಾರೆ.

ಸಮಿತಿ ಸದಸ್ಯರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ ಇದ್ದರು. ಇನ್ನಿಬ್ಬರು ಸದಸ್ಯರಾದ ರಾಜಶೇಖರ ಕಮತಿ, ವಿನಯ ಮೋರೆ ಗೈರಾಗಿದ್ದರು. ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಕಾರ್ಯನಿರ್ವಾಹಕ ಇಂಜಿನಿಯರ್ ಚನ್ನಬಸವರಾಜು, ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯಕುಮಾರ, ಸಂತೋಷಕುಮಾರ ಯರಂಗಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net