ಸಮರ್ಪಕ ನೀರು ಪೂರೈಕೆಗೆ ಆಗ್ರಹ

IMG-20221211-WA0009
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ನೇತೃತ್ವದಲ್ಲಿ ನೂರಾರು ಜನರು ಇಲ್ಲಿನ ಬಾಗಲಕೋಟ ಪೆಟ್ರೋಲ್ ಬಂಕ್ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.
ಎಲ್ ಆ್ಯಂಡ್ ಟಿ ಕಂಪನಿ ನಿರ್ವಹಣೆ ಸರಿಯಾಗಿ ಮಾಡದ ಕಾರಣ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಬಹುತೇಕ ಬಡಾವಣೆಗಳಲ್ಲಿ 8 ದಿನಕ್ಕೊಮ್ಮೆ ನೀರು ಪೂರೈಸುತ್ತಿರುವುದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ನಿರಂತರ ನೀರು ಸರಬರಾಜು ಮಾಡುತ್ತೇವೆ ಎಂದು ಹೇಳುವ ಜನಪ್ರತಿನಿಧಿಗಳು ನೀರು ಪೂರೈಕೆ ವ್ಯತ್ಯಯ ಬಗ್ಗೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.
ನೀರು ಸರಬರಾಜು ನಿರ್ವಹಣೆ ಪಡೆದ ಎಲ್ ಆ್ಯಂಡ್ ಟಿ ಕಂಪನಿ ಸರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಕೂಡಲೇ ಈ ಗುತ್ತಿಗೆ ರದ್ದುಪಡಿಸಬೇಕು. ಜಲಮಂಡಳಿ ಇದ್ದರೂ ಖಾಸಗಿ ಕಂಪನಿಗೆ ಗುತ್ತಿಗೆ ನೀಡುವ ಮೂಲಕ ಶಾಸಕರು, ಸಚಿವರು ಹೊಂದಾಣಿಕೆ ಮಾಡಿಕೊಂಡು ಜಲಮಂಡಳಿ ನೌಕರರಿಗೆ ಹಾಗೂ ಮಹಾನಗರದ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಶೀಘ್ರದಲ್ಲಿ ನೀರು ಸರಬರಾಜು ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದ ಪ್ರತಿಭಟನಾಕಾರರು, ನೀರಿನ ಪೂರೈಕೆ ವ್ಯತ್ಯಯ ಮರುಕಳಿಸಿದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಅಬ್ದುಲ್ ಸಾಬ ಮುಸ್ಕಿಲ ,ಬಸವರಾಜ ಕುರಹಟ್ಟಿಮಠ, ಪ್ರಭುದೇವ ಚೌಟಾ, ಮಹಮ್ಮದ್ ಅಲಿ ಗುಡುಬಾಯಿ, ಜಮೀರ ಹೊಸಪೇಟೆ, ರಫೀಕ ಕೀರಸಾಳ, ನಗರದ 8ನೇ ವಾರ್ಡಿನ ಹಾಗೂ ವಿವಿಧ ಬಡಾವಣೆ ನಿವಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net