ಸಮರ್ಪಕ ಗೊಬ್ಬರ ವಿತರಣೆಗೆ ರೇವಣ್ಣ ಆಗ್ರಹ

Published on

ಹಾಸನ: ಜಿಲ್ಲೆಯಲ್ಲಿ ಮಳೆ ಉತ್ತಮವಾಗಿರುವುದರಿಂದ ಬಿತ್ತನೆ ಚುರುಕುಗೊಂಡಿದೆ. ಆದರೆ ರೈತರಿಗೆ ರಸಗೊಬ್ಬರ ಕೊರತೆ ಎದುರಾಗಿದ್ದು, ಸಮರ್ಪಕ ಗೊಬ್ಬರ ವಿತರಣೆಯಲ್ಲಿ ಸರಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ರೇವಣ್ಣ ಆರೋಪಿಸಿದರು.


ಡಿಎಪಿ ಹಾಗೂ ಯೂರಿಯಾ ರಸಗೊಬ್ಬರ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ 546 ಟನ್ ಯೂರಿಯಾ, 1200 ಟನ್ ನಾಗಾರ್ಜುನ ಕಂಪೆನಿಯ ಗೊಬ್ಬರ, 1800 ಟನ್ 18 : 26 ಸೇರಿದಂತೆ ವಿವಿಧ ಗೊಬ್ಬರ ಜಿಲ್ಲೆಗೆ ಬಂದಿದೆ. ಅದನ್ನು ಸೂಕ್ತ ರೀತಿ ರೈತರಿಗೆ ತಲುಪಿಸಲು ಕ್ರಮ ಆಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸೊಸೈಟಿ ಅಧಿಕಾರಿಗಳ ಸಭೆ ಕರೆದು ಅವರ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಆಲೂಗಡ್ಡೆ, ಜೋಳ, ಭತ್ತ ಬಿತ್ತನೆಗೆ ಅಣಿಯಾಗಿರುವ ರೈತರಿಗೆ ಗೊಬ್ಬರ ಅಭಾವ ಆಗದಂತೆ ಕ್ರಮ ವಹಿಸಬೇಕು. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಸಮರ್ಪಕ ನಿರ್ವಹಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರವೀಣ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರವೀಣ್ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಪ್ರಕರಣವನ್ನು ರಾಜಕೀಯವಾಗಿ ತರಲು ಇಷ್ಟ ಪಡುವುದಿಲ್ಲ. ಪ್ರವೀಣ್ ಪತ್ನಿ ಹಾಗೂ ಪೋಷಕರ ನೋವಿಗೆ 25 ಲಕ್ಷ ರೂ. ಪರಿಹಾರ ಸಾಕಾಗದು, ಸರಕಾರಿ ನೌಕರಿ ನೀಡುವ ಬಗ್ಗೆ ಸರ್ಕಾರದಿಂದ ಘೋಷಣೆ ಆಗಲಿ ಎಂದು ಆಗ್ರಹಿಸಿದರು.
ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಸರಣಿ ಕೊಲೆಗಳ ಬಗ್ಗೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಂತಹ ಅಹಿತಕರ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net