ಸಮರ್ಪಕ ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ

27 Dwd 8
Published on

ಧಾರವಾಡ: ಕರ್ನಾಟಕ ಸರ್ಕಾರದ ವಿಶೇಷ ಘಟಕ ಯೋಜನೆ (ಎಸ್​ಸಿಪಿ) ಹಾಗೂ ಗಿರಿಜನ ಉಪ ಯೋಜನೆ (ಟಿಎಸ್​ಪಿ) ಅಡಿ 37 ಇಲಾಖೆಗಳು ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಶೇ. 59ರಷ್ಟು ಪ್ರಗತಿ ಸಾಧಿಸಿವೆ. ಮಾರ್ಚ್ ಅಂತ್ಯದೊಳಗೆ ಬಾಕಿ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ ನಿಗದಿತ ಗುರಿ ಸಾಧಿಸಬೇಕು. ವಿಫಲವಾದರೆ ಅಂಥ ಅಧಿಕಾರಿಗಳ ವಿರುದ್ಧ ಎಸ್​ಸಿಪಿ, ಟಿಎಸ್​ಪಿ ಕಾಯ್ದೆಯಡಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ ನೀಡಿದರು.

ತಮ್ಮ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 2019- 20ನೇ ಸಾಲಿನ ಜನವರಿ ಅಂತ್ಯದವರೆಗಿನ ವಿವಿಧ ಇಲಾಖೆಗಳು ಎಸ್​ಸಿಪಿ, ಟಿಎಸ್​ಪಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿಗೆ ಎಸ್​ಸಿಪಿ ಯೋಜನೆಯಡಿ 137 ಕೋಟಿ ರೂ. ಅನುದಾನ ನಿಗದಿಗೊಳಿಸಿ 1,62,720 ಕಾರ್ಯಕ್ರಮಗಳ ಗುರಿ ನೀಡಲಾಗಿತ್ತು. ಅದರಲ್ಲಿ 103 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 62.67 ಕೋಟಿ ರೂ. ವೆಚ್ಚವಾಗಿದೆ. ಶೇ. 61ರಷ್ಟು ಪ್ರಗತಿ ಸಾಧಿಸಲಾಗಿದೆ. ಟಿಎಸ್​ಪಿ ಯೋಜನೆಯಡಿ 53 ಕೋಟಿ ರೂ. ಅನುದಾನ ನಿಗದಿಗೊಳಿಸಿ 105507.2 ಕಾರ್ಯಕ್ರಮಗಳ ಗುರಿ ನೀಡಲಾಗಿತ್ತು. ಅದರಲ್ಲಿ 40 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 22 ಕೋಟಿ ರೂ. ವೆಚ್ಚವಾಗಿದೆ. ಶೇ. 54ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. ಎಸ್​ಸಿಪಿ ಟಿಎಸ್​ಪಿ ಸೇರಿ 190 ಕೋಟಿ ರೂ. ಅನುದಾನ ನಿಗದಿಗೊಳಿಸಿ 268227 ಕಾರ್ಯಕ್ರಮ ಗುರಿ ನೀಡಲಾಗಿತ್ತು. ಅದರಲ್ಲಿ 143.96 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 84 ಕೋಟಿ ರೂ. ವೆಚ್ಚವಾಗಿದೆ. ಶೇ. 59ರಷ್ಟು ಪ್ರಗತಿ ಸಾಧಿಸಲಾಗಿದೆ. ಬರುವ 15ರಿಂದ 20 ದಿನಗಳಲ್ಲಿ ಬಾಕಿ ಇರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ ಮಾತನಾಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಂ.ಆರ್. ಶಾನಭಾಗ, ಡಿಡಿಪಿಐ ಎಂ.ಎಲ್. ಹಂಚಾಟೆ, ಮೋಹನ ಭರಮಕ್ಕನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net