ಸಮರ್ಪಕ ಅನುಷ್ಠಾನವಾಗದ ನರೇಗಾ

12rajesh1
Published on

ಚಾಮರಾಜನಗರ: ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ(ನರೇಗಾ) ಗುರಿಯನ್ನೂ ಮೀರಿ ಮಾನವ ದಿನಗಳ ಸೃಜನೆ ಮಾಡಲಾಗಿದ್ದು, ಅದಾಗ್ಯೂ ಇನ್ನಿತರೆ ಹಲವಾರು ಕಾರಣಗಳಿಂದ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗುತ್ತಿಲ್ಲ ಎಂದು ಹೇಳಲಾಗುತ್ತದೆ.

ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2024-25 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 25.28 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ. ಅದರಂತೆ ಶೇ.101.13 ರಷ್ಟು ಗುರಿ ಸಾಧನೆಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 11,276 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಯಡಿ 64,640 ಕುಟುಂಬಗಳಿಗೆ ಅನುಕೂಲವಾಗಿದ್ದು, 1,04,764 ಕಾರ್ಮಿಕರಿಗೆ ಇದರಿಂದ ಉದ್ಯೋಗ ದೊರಕಿದಂತಾಗಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೇ ನರೇಗಾದಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳು ಭಾಗವಹಿಸುವಿಕೆಯಲ್ಲಿ 13 ನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೂ ನರೇಗಾ ಯೋಜನೆಯಲ್ಲಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕ ಕೂಲಿ ದೊರೆಯುತ್ತಿಲ್ಲ. ಕೂಲಿ ಹಣ ಪಾವತಿ ಮಾಡಲು ವಿಳಂಬ ಮಾಡಲಾಗುತ್ತಿದೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ, ಹಲವಾರು ತಾಂತ್ರಿಕ ಸಮಸ್ಯೆಗಳು ಹಾಗೂ ಇನ್ನಿತರೆ ಕಾರಣಗಳಿಂದ ಜನರು ನರೇಗಾ ಯೋಜನೆಯಡಿ ಉದ್ಯೋಗ ಮಾಡಲು ಬರುವುದಿಲ್ಲ ಎಂಬು ಆರೋಪಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ರ್ಸಥಳಿಯವಾಗಿ ಕೂಲಿ ದೊರೆಯದ ಕಾರ್ಮಿಕರು ಬೆಂಗಳೂರು ಹಾಗೂ ಇನ್ನಿತರೆ ಕಡೆಗಳಿಗೆ ಕೂಲಿಗಾಗಿ ವಲಸೆ ಹೋಗುವುದು ನಿರಂತರವಾಗಿ ನಡೆಯುತ್ತಲೇ ಇದೆ. ಆಗಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಈವಾರದ ಲೌಡಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಪ್ರತ್ಯೇಕ ಇಲಾಖೆ ಮಾಡಿ

ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಮರ್ಪಕವಾಗಿ ಕೆಲಸ-ಕಾಮಗಾರಿಗಳು ನಡೆಯುತ್ತಿಲ್ಲ. ಈ ಯೋಜನೆಯಿಂದ ಅಭಿವೃದ್ಧಿ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡವಾಗುತ್ತಿದೆ. ಆದ್ದರಿಂದ ಸರ್ಕಾರವು ಇದನ್ನು ಪ್ರತ್ಯೇಕವಾದ ಒಂದು ಇಲಾಖೆ ಮಾಡಿ ನರೇಗಾ ಯೋಜನೆ ಮತ್ತಷ್ಟು ಪ್ರಗತಿ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕಾಗಿದೆ.

ಕಂದಳ್ಳಿ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ, ಯಳಂದೂರು

*ಸಕಾಲಕ್ಕೆ ಕೂಲಿ ಹಣ ನೀಡುವುದಿಲ್ಲ

ನರೇಗಾದಲ್ಲಿ ಒಂದು ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಬೇಕೆಂದು ನಿಯಮವಿದೆ.ಕೆಲವು ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ. ಸಕಾಲಕ್ಕೆ ಕೂಲಿ ಹಣ ನೀಡದಿರುವ ಸಮಸ್ಯೆ ಇದ್ದು, ಅಧಿಕಾರಿಗಳ ವೈಫಲ್ಯಗಳಿಂದ ಈಗಾಗಿದೆ. ಕೂಲಿ ಹಿಂದೆ 349 ರೂ ಇತ್ತು. ಆದರೀಗ ಕೇಂದ್ರ ಸರ್ಕಾರ 370 ರೂಗೆ ಹೆಚ್ಚಿಸಿದೆ. ಇದು ಕಾರ್ಮಿಕರಿಗೆ ಸಂತಸ ತಂದಿದೆ. ವೈಯಕ್ತಿಕ ಕಾಮಗಾರಿಗಳ ಜತೆಗೆ ಸಾರ್ವಜನಿಕ ಕಾಮಗಾರಿಗಳು ಅತಿ ಹೆಚ್ಚಾಗಿ ನಡೆಯಬೇಕಾಗಿದೆ. ಒಂದು ಕಾಮಗಾರಿಗೆ ಶೇ.69 ರಷ್ಟು ಸಾಮಗ್ರಿ ಮೊತ್ತ ಮತ್ತು ಶೇ.40 ರಷ್ಟು ಕೂಲಿಯ ಮೊತ್ತ ನೀಡಬೇಕಿದೆ.

ಮಂಜುನಾಥ್, ಮುಳ್ಳೂರು, ಕೊಳ್ಳೇಗಾಲ

*ಅಧಿಕಾರಿಗಳು ಸ್ಪಂದಿಸುವುದಿಲ್ಲ

ನರೇಗಾ ಕೂಲಿ ಕೆಲಸಗಳು ಜನರಿಗೆ ಸಮಪರ್ಕವಾಗಿ ಸಿಗುತ್ತಿಲ್ಲ. ಗ್ರಾ.ಪಂ ಸದಸ್ಯರು ಹಾಗೂ ಗ್ರಾ.ಪಂ ಅಧಿಕಾರಿಗಳು ಕೂಲಿ ಕೆಲಸ ನೀಡುವುದರಲ್ಲಿ ಕಾರ್ಮಿಕರಿಗೆ ಸ್ಪಂದಿಸುತ್ತಿಲ್ಲ. ಒಬ್ಬ ಪಿಡಿಒ ಎರಡು ಪಂಚಾಯಿತಿ ಜವಬ್ದಾರಿ ಹೊತ್ತಿರುತ್ತಾರೆ. ಇದು ಕೂಡ ನರೇಗಾ ಅನುಷ್ಟಾನಕ್ಕೆ ತೊಂದರೆಯಾಗಿದೆ. ನಿರಂತರವಾಗಿ ಕೆಲಸ ಕೊಟ್ಟರೆ ಜನರು ಮಾಡುತ್ತಾರೆ. ತಾಂತ್ರಿಕ ಸಮಸ್ಯೆಗಳ ಕಾರಣ ಹೇಳಿ ಕೂಲಿ ಕೆಲಸಗಳನ್ನು ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಗಮನವನ್ನು ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಮಹಾರಾಷ್ಟ್ರ ಸರ್ಕಾರ 300 ಕೂಲಿ ದಿನಗಳನ್ನು ನೀಡಿದೆ. ನಮ್ಮ ಸರ್ಕಾರ 200 ದಿನ ಜನರು ಕೆಲಸ ಮಾಡಲು ಅವಕಾಶ ನೀಡಬೇಕು.

ಪುಟ್ಟಮ್ಮ, ಜಿಲ್ಲಾ ಸಂಯೋಜಕಿ, ಗ್ರಾಕೂಸು ಸಂಘಟನೆ, ಕೊಳ್ಳೇಗಾಲ

*ಕೂಲಿ ಏರಿಕೆಯಿಂದ ಅನುಕೂಲ

ಗ್ರಾಮೀಣ ಪ್ರದೇಶದಲ್ಲಿ ವಾಸಮಾಡುವ ಬಡ ಮತ್ತು ಮಧ್ಯಮವರ್ಗದವರಿಗೆ ನರೇಗಾ ಯೋಜನೆಯಡಿ ಕೂಲಿ ದೊರಕಿದ ಕಾರಣದಿಂದ ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ. ಪ್ರಸ್ತುತ ನರೇಗಾ ಕೂಲಿ 349 ರೂ, ಇರುವುದನ್ನು 370 ರೂ, ಗೆ ಏರಿಕೆಯನ್ನು ಮಾಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಸಮನಾದ ಕೂಲಿ ನೀಡುವುದರಿಂದ ಜೀವನ ಕಟ್ಟಿಕೊಳ್ಳಲು ದಾರಿಯಾಗಿದೆ. ಒಂದು ಕುಟುಂಬಕ್ಕೆ 100 ದಿನ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ಅನೇಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

ನವೀನ್ ಕುಮಾರ್, ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ, ಹೊಂಗನೂರು, ಚಾಮರಾಜನಗರ

*ಕಾಮಗಾರಿಗೆ ಯಂತ್ರಗಳ ಬಳಕೆ

ಜ್ಯೋತಿಗೌಡನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ತೀರಾ ಕಳಪೆ ಕಾಮಗಾರಿ ಮಾಡಿ, ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಕೆಲವು ಕಾಮಗಾರಿಗಳನ್ನು ಯಂತ್ರಗಳ ಮೂಲಕ ಮಾಡಿಸಿ ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಅವ್ಯವಸ್ಥೆಯಬ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಸಿಇಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಯೋಜನೆಯ ನಿಯಮದಂತೆ ಕೆಲಸವನ್ನು ಮಾಡುವುದಿಲ್ಲ. ಈ ಯೋಜನೆಯ ಮೂಲಕ ವಂಚನೆ ಮಾಡಲಾಗುತ್ತಿದೆ.

ಹರೀಶ್, ನಲ್ಲೂರು, ಚಾಮರಾಜನಗರ

*ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ

ಜಿಲ್ಲೆಯಲ್ಲಿ ಹೆಚ್ಚುಪಾಲು ಮಳೆಯಾಶ್ರಿತ ಪ್ರದೇಶ ಇರುವುದರಿಂದ ಬೇಸಿಗೆ ಸಮಯದಲ್ಲಿ ಜನರಿಗೆ ಸರಿಯಾಗಿ ಕೂಲಿ ದೊರೆಯುವುದಿಲ್ಲ. ಇಂತಹ ವೇಳೆಯಲ್ಲಿ ನರೇಗಾ ಸಾಮಾನ್ಯ ಜನರಿಗೆ ಅತ್ಯಂತ ಸಹಕಾರಿಯಾಗಿದೆ. ಕೆಲವು ಕಡೆಗಳಲ್ಲಿ ಯಂತ್ರಗಳನ್ನು ಬಳಸಿ ಕಾಮಗಾರಿ ಮಾಡುವುದನ್ನು ಹೊರತುಪಡಿಸಿದರೇ, ಉಳಿದಂತೆ ನರೇಗಾ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ಗ್ರಾಮೀಣ ಭಾಗದ ಹಲವಾರು ಜನರು ಈ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಬಾಲಚಂದ್ರಮೂರ್ತಿ, ತಾಲೂಕು ಅಧ್ಯಕ್ಷ, ವೀರಶೈವ ಲಿಂಗಾಯತ ಮಹಾಸಭಾ, ಚಾಮರಾಜನಗರ

*ಗುರಿ ಸಾಧನೆಗೆ ಕ್ರಮ

ತಾಲೂಕಿನಲ್ಲಿ 35 ಗ್ರಾಮಪಂಚಾಯಿತಿಗಳಿದ್ದು, ಹಿಂದಿನ ವರ್ಷದಲ್ಲಿ ನರೇಗಾ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ನಡೆಸಲಾಗಿದೆ. ಈ ಬಾರಿ ಜಿಲ್ಲಾ ಪಂಚಾಯಿತಿಯು 25 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿಯೂ ಗುರಿಸಾಧನೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಷಣ್ಮುಗ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net