ಸಮರ ಸೇನಾನಿಗಳಂತೆ ಪಕ್ಷ ಸಂಘಟಿಸಿ: ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ

SKPPPP WEB
Published on

ಶಿಕಾರಿಪುರ: ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ. ಅದನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.

ಪಟ್ಟಣದಲ್ಲಿ ಬೂತ್ ವಿಜಯ ಅಭಿಯಾನ ಅಂಗವಾಗಿ ಬಿಜೆಪಿ ಏರ್ಪಡಿಸಿದ್ದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿ, ಸಂಘಟನೆ ನಮ್ಮ ಧ್ಯೇಯವಾಗಬೇಕು. ಸಂಘಟಿತ ಪ್ರಯತ್ನ ಮಾಡಿದರೆ ಯಶಸ್ಸು ದೊರೆಯುತ್ತದೆ. ಪ್ರತಿ ಬೂತ್ ಗಟ್ಟಿಯಾಗಬೇಕು, ತನ್ಮೂಲಕ ಪಕ್ಷದ ಜನಪರವಾದ ಚಿಂತನೆಗಳು ಪ್ರತಿ ಮನೆ ಮನೆಗೂ ತಲುಪಬೇಕು. ಪ್ರತಿ ಗ್ರಾಮಗಳಲ್ಲಿ ಪಕ್ಷ ಕಟ್ಟಿದ ಹಿರಿಯರಿದ್ದಾರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಮುನ್ನಡೆಯಬೇಕು ಎಂದರು.

ಸಮರ ಸೇನಾನಿಗಳಂತೆ ಸಂಘಟನೆ ಮಾಡಬೇಕು. ನೀವು ಎಷ್ಟು ಸಮಯವನ್ನು ಪಕ್ಷದ ಸಂಘಟನೆಗಾಗಿ ಕೊಡಲು ಸಾಧ್ಯ ಎನ್ನುವುದನ್ನು ನಿಮ್ಮ ಡೈರಿಯಲ್ಲಿ ನೋಟ್ ಮಾಡಿಟ್ಟುಕೊಳ್ಳಿ. ಪಕ್ಷ ನಿಮ್ಮನ್ನು ಗುರುತಿಸಿ ಹುದ್ದೆಗಳನ್ನು ನೀಡಿದೆ. ನಿಮಗಿಂತ ಹಿರಿತನ ಉಳ್ಳವರು ಯಾವುದೇ ಹುದ್ದೆಯನ್ನು ಅಪೇಕ್ಷಿಸದೆ ಪಕ್ಷಕ್ಕಾಗಿ ದುಡಿದು ಇಹಲೋಕ ತ್ಯಜಿಸಿದ್ದಾರೆ ಅಂತಹ ನಿಸ್ವಾರ್ಥ ಹಿರಿಯರನ್ನು ಸ್ಮರಣೆ ಮಾಡಿ ಮುಂದೆ ಹೆಜ್ಜೆಯಿಡಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಭದ್ರಕೋಟೆಯಾಗಿ ಬೆಳೆಯಲು ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅವರೊಬ್ಬ ಅಪರೂಪದ ಸಂಘಟಕರಾಗಿ ನಮಗೆ ಮಾದರಿ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಅಡಿಪಾಯ ಹಾಕಿದ ತಾಲೂಕು ಶಿಕಾರಿಪುರ. ಇಲ್ಲಿಯ ಬೂತ್ ಕಮಿಟಿಗಳು ರಾಜ್ಯಕ್ಕೆ ಮಾದರಿಯಾಗಿರಬೇಕು ಎಂದು ಹೇಳಿದರು.

ಚುನಾವಣೆಯ ಹೊಸ್ತಿಲಲ್ಲಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ. ರಾಷ್ಟ್ರೀಯ ನಾಯಕರುಗಳಾದಿಯಾಗಿ ರಾಜ್ಯ ನಾಯಕರುಗಳು ಸಂಘಟನೆಯ ಚಿಕ್ಕ ಚಿಕ್ಕ ವಿಷಯಗಳನ್ನು ಜವಾಬ್ದಾರಿ ಪಡೆದಿರುವ ನಿಮಗೆ ನೇರವಾಗಿ ದೂರವಾಣಿ ಕರೆ ಮಾಡಿ ಪರಿಶೀಲಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net