

ಎನ್.ಆರ್.ಪುರ: ಕೆಎಸ್‌ಆರ್‌ಟಿಸಿ ಬಸ್‌ಗಳು ಮನಸ್ಸೋಇಚ್ಛೆ ಸಂಚರಿಸುತ್ತಿವೆ. ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂನಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯುತ್ತಿರುತ್ತಾರೆ. ಸರ್ಕಾರಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರುತ್ತಿಲ್ಲ ಮತ್ತು ಬಂದರೂ ತಡವಾಗಿರುತ್ತದೆ ಎಂದು ಪ್ರಯಾಣಿಕರು ದೂರುಗಳನ್ನು ಹೇಳಿದ್ದಾರೆ ಎಂದರು.
ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಪೋ ಸಂಚಾರ ನಿಯಂತ್ರಣಾಧಿಕಾರಿ ವಸಂತ್‌ಕುಮಾರ್ ಮಾತನಾಡಿ, ಕೆಲವಷ್ಟು ಬಸ್‌ಗಳನ್ನು ಮೈಸೂರು ದಸರಾ ಉತ್ಸವಕ್ಕೆ ತೆರಳಲು ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನಗಳ ಮಟ್ಟಿಗೆ ಬಸ್‌ಗಳ ಕೊರತೆ ಆಗುತ್ತದೆ. ಮಹಿಳಾ ಪ್ರಯಾಣಿಕರು ಹೆಚ್ಚಾಗುತ್ತಿರುವುದು, ರಸ್ತೆಗಳು ಹಾಳಾಗಿರುವುದರಿಂದಲೂ ಸಮಯಕ್ಕೆ ಸರಿಯಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಶೃಂಗೇರಿ ಡಿಪೋ ನಿರ್ಮಾಣ ಜನವರಿ ಅಂತ್ಯದೊಳಗೆ ಪೂರ್ಣಗೊಂಡು ಉದ್ಘಾಟನೆಯಾಗಬೇಕೆಂದು ಶಾಸಕರು ಸೂಚಿಸಿದ್ದಾರೆ. ಡಿಪೋ ನಿರ್ಮಾಣ ಶೇ.75ರಷ್ಟು ಆಗಿದ್ದು, ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಡಿಪೋ ಉದ್ಘಾಟನೆ ನಂತರ ಹೆಚ್ಚು ಬಸ್‌ಗಳನ್ನು ನೀಡಲಾಗುತ್ತದೆ. ಬೆಂಗಳೂರು ಬಿಎಂಟಿಸಿ ಬಸ್‌ಗಳ ಬದಲು ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವ ಚಿಂತನೆ ನಡೆದಿದ್ದು, ಹಾಲಿ ಸಂಚರಿಸುತ್ತಿರುವ ಬಿಎಂಟಿಸಿ ಬಸ್‌ಗಳು ಹಲವಾರು ಡಿಪೋಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ ಅಧಿಕಾರಿ ಪ್ರದೀಪ್ ಮಾತನಾಡಿ, ಜೂನ್‌ವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ. ಜುಲೈ ಹಾಗೂ ಆಗಸ್ಟ್ ಹಣ ಬಿಡುಗಡೆಯಾಗಬೇಕಿದೆ. ಹಿಂದೆ ಅರ್ಜಿ ಸಲ್ಲಿಸಿದವುಗಳಲ್ಲಿ ಐಟಿ, ಜಿಎಸ್‌ಟಿ ಪಾವತಿದಾರರೆಂದು ಬಾಕಿ ಉಳಿಸಿಕೊಂಡ ಹಾಗೂ ತಿರಸ್ಕರಿಸಿದ ಅರ್ಜಿಗಳನ್ನು ಮತ್ತೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದರು.
359 ಎಸ್ಸಿ, ಎಸ್ಟಿ ಅರ್ಜಿಗಳ ಲಾನುಭವಿಗಳು ಸ್ವಯಂ ದೃಢೀಕರಣ ನೀಡಬೇಕು. ಕೆಲವೊಂದು ಕುಟುಂಬದಲ್ಲಿ ಪತ್ನಿ ಇತರ ಜಾತಿಯವರಾಗಿದ್ದು, ಪತಿ ಎಸ್ಸಿ, ಅಥವಾ ಎಸ್ಟಿ ಆಗಿದ್ದು, ಇತರ ಎಂದು ನಮೂದಿಸಿದ್ದಾರೆ. ಇದರಿಂದ ಗೊಂದಲಗಳಿದ್ದು, ಅಂಥ ಅರ್ಜಿದಾರರು ಸ್ವಯಂ ದೃಢೀಕರಣ ಸಲ್ಲಿಸಬೇಕು ಎಂದು ತಿಳಿಸಿದರು.
ಮೊದಲು ನೇರವಾಗಿ ರಾಜ್ಯ ಮಟ್ಟದಿಂದಲೇ ಯೋಜನೆಯ ಹಣ ಜಮೆ ಮಾಡಲಾಗುತ್ತಿತ್ತು. ಈಗ ಜಿಲ್ಲಾ ಮಟ್ಟಕ್ಕೆ ಜಮೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಜೆಟ್‌ಗೆ ತಕ್ಕಂತೆ ಕಂತಿನ ಹಣ ಜಮೆ ಮಾಡಲಾಗುತ್ತದೆ. ಒಟ್ಟಿಗೆ ಹಣ ಜಮೆ ಮಾಡುವುದು ಸರ್ಕಾರದ ಹಂತದಲ್ಲಿಯೇ ಆಗಬೇಕೆಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ 673 ಪಡಿತರ ಕಾರ್ಡುಗಳನ್ನು ಪರಿಶೀಲನೆಗೆ ಒಳಪಡಿಸುವಂತೆ ಪಟ್ಟಿ ಬಂದಿದೆ. ಅವುಗಳಲ್ಲಿ ಈಗಾಗಲೇ 25 ಕಾರ್ಡುದಾರರು ಸ್ವಯಂಪ್ರೇರಿತರಾಗಿ ಕಾರ್ಡುಗಳನ್ನು ಇಲಾಖೆಗೆ ಒಪ್ಪಿಸಿದ್ದಾರೆ. ಕೆಲವರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಕಂಪನಿಗಳಲ್ಲಿ ದುಡಿಯುತ್ತಿದ್ದು, ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಅಂಥವ ಕಾರ್ಡುಗಳನ್ನು ರದ್ದು ಪಡಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ಹೇಳಿದರು. ಕುಟುಂಬದ ನಿರ್ವಹಣೆ, ಜೀವನೋಪಾಯಕ್ಕೆ ಒಂದು ಹಳದಿ ಬೋರ್ಡಿನ ವಾಹನ ಇರಿಸಿಕೊಂಡವರ ಬಿಪಿಎಲ್ ಕಾರ್ಡು ರದ್ದುಗೊಳಿಸುವುದಿಲ್ಲ. ಒಂದಕ್ಕಿಂತ ಹೆಚ್ಚು ಹಳದಿ ಬೋರ್ಡ್‌ನ ವಾಹನಗಳಿದ್ದರೆ ಕಾರ್ಡುಗಳನ್ನು ರದ್ದುಗೊಳಿಸಲಾಗುವುದು. ಸೆಪ್ಟೆಂಬರ್ ಅಂತ್ಯದವರೆಗೆ ಪಡಿತರ ಚೀಟಿಯಲ್ಲಿನ ಹೆಸರು, ವಿಳಾಸ ಬದಲಾವಣೆಗೆ ಅವಕಾಶವಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಟಿ.ಟಿ.ಇಸ್ಮಾಯಿಲ್, ಇಂದಿರಾನಗರ ರಘು, ಬೇಸಿಲ್, ನಾಗರಾಜ್, ನಿತ್ಯಾನಂದ, ಜಯರಾಂ, ದೇವರಾಜ್, ಹೂವಮ್ಮ, ಅಪೂರ್ವಾ, ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ, ಶ್ರೀದೇವಿ ಇದ್ದರು.