ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಿ

JUN 02-HRP-02
Published on

ಹರಪನಹಳ್ಳಿ: ತಾಲೂಕಿನ ಅರಸೀಕೆರೆಯ ಕೋಲಶಾಂತೇಶ್ವರ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಹೋಬಳಿ ವ್ಯಾಪ್ತಿಯ ಏಳು ಗ್ರಾಮ ಪಂಚಾಯಿತಿಗಳ ನೂರಾರು ಜನರು ಅಹವಾಲು ಸಲ್ಲಿಸಿದರು.

ಅರಸೀಕೆರೆ ಶಾಲೆ-ಕಾಲೇಜಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ನಿತ್ಯ ಬರುವ ನೂರಾರು ವಿದ್ಯಾರ್ಥಿನಿಯರು ಸಮರ್ಪಕ ಬಸ್ ಸೌಲಭ್ಯ ಇಲ್ಲದಿರುವ ಬಗ್ಗೆ ದೂರು ಸಲ್ಲಿಸಿದರು. ಸರಿಯಾದ ಸಮಯಕ್ಕೆ ಬಸ್ ಬಾರದೆ ನಿತ್ಯ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗಿದೆ. ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಅರಸೀಕೆರೆಯಲ್ಲಿ ಹಾಸ್ಟೆಲ್ ಸೌಲಭ್ಯ ಕೂಡ ಕಲ್ಪಿಸಬೇಕೆಂದು ಆಗ್ರಹಿಸಿದರು. ಸೂಕ್ತ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಸಾರಿಗೆ ಡಿಪೋ ವ್ಯವಸ್ಥಾಪಕಿ ಮಂಜುಳಾಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚಿಸಿದರು. ಹಾಸ್ಟೆಲ್ ಆರಂಭಕ್ಕೆ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದು ಡಿಸಿ ತಿಳಿಸಿದರು.

ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಇರುವುದಿಲ್ಲ. ವಿದ್ಯುತ್ ವ್ಯವಸ್ಥೆ ಇಲ್ಲದೆ ರೋಗಿಗಳಿಗೆ ತೊಂದರೆಯಾಗುತ್ತಿದೆ. 68 ಗ್ರಾಮಗಳ ಜನರು ಅರಸೀಕೆರೆ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದರು. ಸಾಕಷ್ಟು ಸಂಬಳ ಮತ್ತು ಇತರ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಬರುತ್ತಿಲ್ಲ ಎಂದರು. ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಹೆಚ್ಚಿನ ಸಿಬ್ಬಂದಿ ಮತ್ತು ವೈದ್ಯರನ್ನು ನೇಮಿಸುವಂತೆ ಡಿಎಚ್‌ಒ ಶಂಕರನಾಯ್ಕಗೆ ಡಿಸಿ ಸೂಚಿಸಿದರು.

ಪುಣಭಟ್ಟದಲ್ಲಿ ಸ್ಮಶಾನ ಹಳ್ಳ ಹರಿಯುವ ಜಾಗದಲ್ಲಿ ಇದ್ದು, ಮಳೆ ಬಂದಾಗ ಅಂತ್ಯಕ್ರಿಯೆಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರು ನೀಡಿದರು. ತಾಲೂಕಿನ ಯಾವುದೇ ಗ್ರಾಮದಲ್ಲಿ ಈ ರೀತಿಯ ತೊಂದರೆಗಳು ಇದ್ದಲ್ಲಿ ಕೂಡಲೆ ಸರ್ಕಾರಿ ಜಾಗ ಗುರುತಿಸಿ ಸ್ಮಶಾನ ನಿರ್ಮಿಸಬೇಕು. ಇಲ್ಲದಿದ್ದರೆ ಬೇರೆಯವರಿಂದ ಜಾಗ ಖರೀದಿಸಿ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸುವಂತೆ ತಾಪಂ ಇಒ ಹಾಗೂ ಪಿಡಿಒಗೆ ಜಿಲ್ಲಾಧಿಕಾರಿ ತಿಳಿಸಿದರು.

ಅರಸೀಕೆರೆಯಲ್ಲಿ ಮಟ್ಕಾ ದಂಧೆ ವ್ಯಾಪಕವಾಗಿದ್ದು, ತಡೆಗಟ್ಟಬೇಕು ಎಂದು ಸ್ಥಳೀಯರು ದೂರು ಸಲ್ಲಿಸಿದರು. ಈ ದಂಧೆ ನಡೆಸುವ ಪ್ರಮುಖರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕೆಂದು ಪಿಎಸ್‌ಐ ಕೆ.ರಂಗಯ್ಯಗೆ ಡಿಸಿ ತಾಕೀತು ಮಾಡಿದರು. ಹರಪನಹಳ್ಳಿಯಿಂದ ಸಂಜೆ 5ರ ನಂತರ ಅರಸೀಕೆರೆ, ಮಾದಿಹಳ್ಳಿ, ಯರಬಾಳು ಸೇರಿದಂತೆ ಇತರ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಕೋರಿದರು. ಒಟ್ಟು 74 ಅಹವಾಲು ಸಲ್ಲಿಕೆಯಾಗಿದ್ದು, ಪಿಂಚಣಿಗೆ ಸಂಬಂಧಿಸಿದ ಎರಡು ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net