

ಬೆಟ್ಟದಪುರ: ಅರೆಮಲೆನಾಡು ಎಂದೇ ಹೆಸರುವಾಸಿಯಾಗಿರುವ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿ ಈ ಬಾರಿ ಮುಂಗಾರು ದುರ್ಬಲವಾಗಿದ್ದು, ಸಮಯಕ್ಕೆ ಮಳೆ ಬಾರದೇ ರೈತರು ಆತಂಕಕ್ಕೀಡಾಗಿದ್ದಾರೆ.
ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ಸುತ್ತಮುತ್ತಲಿನ ಭಾಗದ ಸಾವಿರಾರೂ ಎಕರೆ ಭೂಮಿಯಲ್ಲಿ ಬೇಸಾಯ ಮಾಡಿರುವ ವಿವಿಧ ಬೆಳೆಗಳು ಬಾಡುತ್ತಿವೆ. ವರುಣ ಕೈಬಿಡುವುದಿಲ್ಲ ಎಂದು ನಂಬಿ ಮೇ ತಿಂಗಳಿನಲ್ಲಿ ಉದುರಿದ ಮಳೆಯಲ್ಲಿಯೇ ಬಿತ್ತನೆ ಮಾಡಿದ ಜೋಳ, ತಂಬಾಕು, ಶುಂಠಿ ಸೇರಿದಂತೆ ಇನ್ನಿತರ ಬೆಳೆಗಳು ಬೆಳವಣಿಗೆ ಹಂತದಲ್ಲೇ ಒಣಗುತ್ತಿವೆ. ರೈತರು ಕೊರೆಸಿರುವ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ನೀರಾವರಿ ಆಶ್ರಿತ ಜಮೀನುಗಳಲ್ಲಿಯೂ ಕೃಷಿ ಕಷ್ಟವಾಗಿದೆ. ಮಳೆ ಆಶ್ರಿತ ಜಮೀನುಗಳಲ್ಲಿ ಮಳೆ ಇಲ್ಲದೆ, ಜಾನುವಾರು ಮೇಯಿಸುವುದಕ್ಕೂ ಹುಲ್ಲು ಸಹ ಹುಟ್ಟದೆ ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಕಳೆದ ವರ್ಷ ಸಹ ಮಳೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬೆಳೆ ಕೈಗೆ ಬಾರದೆ ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಕಾರ್ಮಿಕರಿಗಾಗಿ ವಿವಿಧೆಡೆ ಮಾಡಿದ ಸಾಲ ಮರುಪಾವತಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಒಡವೆ ಗಿರವಿ ಇಟ್ಟು ಪಡೆದ ಸಾಲದ ಬಡ್ಡಿಯನ್ನು ಸಹ ತೀರಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಣವಂತರು ರೈತರಿಗೆ ಸಾಲ ಕೊಡಲು ಹಿಂದೆ ಸರಿಯುತ್ತಿದ್ದಾರೆ. ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಸಾಲ ಕೇಳಲು ಹಳೇ ಸಾಲ ಮರುಪಾವತಿಗೆ ನೀಡಲಾಗುತ್ತಿದೆ.
ಮೋಡವಿದ್ದರೂ ಬಾರದ ಮಳೆ : ಕರಾವಳಿಯಲ್ಲಿ ಮುಂಗಾರು ಪ್ರವೇಶ ಮಾಡಿ ವಾರ ಕಳೆಯುತ್ತಾ ಬಂದಿದೆ. ಇನ್ನು ಬೆಟ್ಟದಪುರ ಸೇರಿದಂತೆ ಪಿರಿಯಾಪಟ್ಟಣ ತಾಲೂಕು, ಮಡಿಕೇರಿ ಜಿಲ್ಲೆಗೆ ಸಮೀಪ ಇರುವ ಹಿನ್ನೆಲೆ ಈ ವ್ಯಾಪ್ತಿಯಲ್ಲಿ ಬೇಗ ಮಳೆಯಾಗಬೇಕಿತ್ತು. ಆದರೆ ನಾಲ್ಕೈದು ದಿನಗಳಿಂದ ಮೋಡಕವಿದ ವಾತಾವರಣದ ಇದ್ದರೂ ಮಳೆಯಾಗಿಲ್ಲ.
ಬತ್ತಿಹೋಗುತ್ತಿರುವ ಕೆರೆಕಟ್ಟೆಗಳು: ಮಳೆ ಇಲ್ಲದೆ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ಕೆರೆಕಟ್ಟೆಗಳು ಬತ್ತಿಹೋಗುತ್ತಿವೆ. ಪಂಪ್‌ಸೆಟ್ ಸೌಲಭ್ಯ ಹೊಂದಿರುವಂತವರು ಮಳೆ ಆಗಮಿಸುವರೆಗೆ ನೀರಿನ ಸೌಲಭ್ಯದಲ್ಲಿ ಬೇಸಾಯ ಮಾಡುತ್ತಾರೆ. ಆದರೆ ಪಂಪ್‌ಸೆಟ್ ಸೌಲಭ್ಯ ಇಲ್ಲದೆ ಇರುವರು ಮಳೆ ಬಿಟ್ಟರೇ ಕೆರೆ-ಕಟ್ಟೆಗಳ ನೀರನ್ನೇ ಕೃಷಿ ಚಟುವಟಿಕೆಗಳಿಗೆ ಬಳಸುತ್ತಾರೆ. ಆದರೆ ಕಳೆದ ಎರಡೂ ತಿಂಗಳಿಂದ ಬಿರುಬಿಸಿಲಿಗೆ ಸಣ್ಣಪುಟ್ಟ ಕಟ್ಟೆಗಳು ಒಣಗಿ ಹೋದರೆ, ದೊಡ್ಡ ದೊಡ್ಡ ಕೆರೆಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ.
ನೆಲಕಚ್ಚುತ್ತಿರುವ ತಂಬಾಕು: ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಗಿಡಗಳಿಗೆ ನೀರಿನ ಪ್ರಮಾಣ ಹೆಚ್ಚಾಗಿ ಬೇಕಾಗಿದೆ. ಆದರೆ ಸರಿಯಾದ ಪ್ರಮಾಣದಲ್ಲಿ ಮಳೆ ಆಗದೆ ಇರುವ ಪರಿಣಾಮ ಈಗಾಗಲೇ ಹಲವಡೆ ತಂಬಾಕು ಗಿಡಗಳು ನೆಲೆ ಕಚ್ಚುತ್ತಿವೆ. ಇದರಿಂದ ಅನೇಕ ರೈತರು ಬೇಸರದಿಂದ ಟ್ರ್ಯಾಕ್ಟರ್‌ನಲ್ಲಿ ಬೆಳೆ ಮಾಡಿದ ಜಮೀನಿನ್ನೇ ಉಳಿಮೆ ಮಾಡಿದ್ದಾರೆ. ಕೆಲ ರೈತರು ಪಂಪ್‌ಸೆಟ್ ನಂಬಿ ಶುಂಠಿ ಬೇಸಾಯ ಮಾಡಿದ್ದಾರೆ. ಆದರೆ ಮಳೆ ಆಶ್ರಿತ ಕೃಷಿಕರು ಮಳೆರಾಯನ ಪ್ರಾರ್ಥನೆ ಮಾಡುತ್ತಿದ್ದಾರೆ.