

ಹಾಸನ: ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ವಕೀಲ ಎಸ್.ವಿನೋದ್ ಮನೋಹರ್ ಅಭಿಪ್ರಾಯಪಟ್ಟರು.
ನಗರದ ಎಂ.ಜಿ ರಸ್ತೆಯಲ್ಲಿರುವ ಬುಧವಾರ ಎಂ.ಕೃಷ್ಣ ಕಾನೂನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಶಸ್ಸು ಪಡೆಯಬೇಕಾದರೆ ಅಧ್ಯಯನ ಬಹಳ ಮುಖ್ಯ. ಸತತ ಶ್ರಮವಹಿಸಿದರೆ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಹೊಂದಲು ಸಾಧ್ಯವಾಗುತ್ತದೆ, ಕಾನೂನು ಅಭ್ಯರ್ಥಿಗಳು ನಿರಂತರ ಓದುವ ಅಭ್ಯಾಸ ಇಟ್ಟುಕೊಂಡಿರಬೇಕು, ಸತತ ಪರಿಶ್ರಮದಿಂದ ಕಾನೂನು ಪದವಿ ನಂತರ ನ್ಯಾಯಾಂಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆ ಪಡೆಯಲು ಅನೇಕ ಅವಕಾಶಗಳಿವೆ, ಮಾತೃ ಭಾಷೆ ಕನ್ನಡದ ಜೊತೆ ಇಂಗ್ಲಿಷ್ ಕಲಿಯುವುದು ವೃತ್ತಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ.ವಿ.ಶ್ರೀನಿವಾಸ ಮಾತನಾಡಿ, ವಕೀಲ ವೃತ್ತಿಯಲ್ಲಿ ಆತ್ಮ ವಿಶ್ವಾಸ ಮುಖ್ಯವಾಗಿದ್ದು, ಸಂವಹನ, ಕೌಶಲ್ಯ ಬೆಳೆಸಿಕೊಳ್ಳಬೇಕು. ಪ್ರಥಮ ವರ್ಷದ ಕಾನೂನು ಪದವಿ ವಿದ್ಯಾಭ್ಯಾಸಕ್ಕೆ ಸೇರಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಾಲೇಜು ಮಂಡಳಿ ಉಪಾಧ್ಯಕ್ಷ ಚಂದ್ರಶೇಖರ್ ಅಯ್ಯರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಹಾಸ, ಡಾ.ಎಚ್.ಎಸ್.ಹೇಮಂತ್ ಕುಮಾರ್,ಡಾ.ಬಿ.ಎಂಉಮೇಶ್,ಕೆ.ಎಸ್.ರೇಖಾ, ಸೀಮಾ ಫಿರ್ದೋಸ್, ಎಸ್.ಷರಣ್ಯ, ಪ್ರಿಯದರ್ಶಿನಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪೋಷಕರುಗಳು ಹಾಜರಿದ್ದರು.