

ಶಿವಮೊಗ್ಗ: ಸಮಯ ಪ್ರಜ್ಞೆ, ಶಿಸ್ತಿಗೆ ಸರ್ ಎಂ.ವಿಶ್ವೇಶ್ವರಯ್ಯ ಅನುಕರಣೀಯರು. ಉತ್ತಮ ವ್ಯಕ್ತಿ, ಉತ್ತಮ ದೇಶ ನಿರ್ವಣಕ್ಕೆ ಸಮಯ ಪಾಲನೆ ಅವಶ್ಯ ಎಂದು ಪ್ರತಿಪಾದಿಸಿದವರು ಸರ್ ಎಂ.ವಿಶ್ವೇಶ್ವರಯ್ಯ ಎಂದು ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಗಿರಿಧರ್ ಮಲ್ನಾಡ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಮಂಗಳವಾರ ಸರ್ಎಂವಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ವಿವಿಗಳು ಪದವೀಧರರ ನಿರ್ಮಾಣ ಮಾಡುವ ಕಾರ್ಖಾನೆಗಳಾಗಬಾರದು. ಅವರಲ್ಲಿ ಶಿಸ್ತು ರೂಢಿಸಬೇಕು ಎಂಬುದು ಸರ್ಎಂವಿ ಅಭಿಪ್ರಾಯವಾಗಿತ್ತು ಎಂದರು.
ನವ ಕರ್ನಾಟಕದ ನಿರ್ವಣಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ. ಅಣೆಕಟ್ಟು, ಸೇತುವೆ, ಕೈಗಾರಿಕೆಗಳ ನಿರ್ವಣದಲ್ಲಿ ಅಂದಿನ ಮೈಸೂರು ರಾಜ್ಯ ಉತ್ತಮ ಪ್ರಗತಿ ಸಾಧಿಸಲು ಸರ್ಎಂವಿ ಕಾರಣ. ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿದ್ದ ಅವರು, ಕೆಆರ್ಎಸ್ ನಿರ್ವಿುಸಿದ್ದು ಮೈಲಿಗಲ್ಲು. ಕುಡಿಯುವ ನೀರು, ಕೃಷಿ ಎಲ್ಲದಕ್ಕೂ ಸಾಕಷ್ಟು ಕೊಡುಗೆ ನೀಡಿದರು ಎಂದು ಹೇಳಿದರು.
ಮೈಸೂರು ಅರಸರ ಕಾಲದಲ್ಲಿ ಸ್ಥಾಪಿಸಿದ ಛೇಂಬರ್ ಆಫ್ ಕಾಮರ್ಸ್ ಮತ್ತು ಮೈಸೂರು ವಿವಿ ಈಗಾಗಲೇ 100 ವರ್ಷ ಪೂರೈಸಿದೆ. ಶತಮಾನ ಕಂಡ ಮೈಸೂರು ವಿವಿಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಅನುದಾನ ನೀಡಿತ್ತು ಎಂದು ಆಡಳಿತವನ್ನು ಸ್ಮರಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಅರ್. ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು. ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್, ಪ್ರಮುಖರಾದ ಪಿ.ರುದ್ರೇಶ್, ಉದಯ್, ಬಿ.ಆರ್.ಸಂತೋಷ್ ಮುಂತಾದವರಿದ್ದರು.