ಸಮಯ ಪ್ರಜ್ಞೆ ಇಲ್ಲದ ಸಿಬ್ಬಂದಿಗೆ ಕ್ಲಾಸ್

10 ard 01
Published on

ಔರಾದ್: ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಶುಕ್ರವಾರ ಶಾಸಕ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ, ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಳಗ್ಗೆ ೧೦ ಗಂಟೆಗೆ ಮಿನಿ ವಿಧಾನ ಸೌಧದ ಪ್ರವೇಶ ದ್ವಾರದಲ್ಲಿಯೇ ಠಿಕಾಣಿ ಹೂಡಿದ ಶಾಸಕ, ಪ್ರತಿ ಅಧಿಕಾರಿ ಬಗ್ಗೆ ಮಾಹಿತಿ ಪಡೆದು ೩೫ ಸಿಬ್ಬಂದಿ ಸೇವೆಗೆ ಸಮಯಕ್ಕೆ ಸರಿಯಾಗಿ ಬಾರದಿರುವುದನ್ನು ಕಂಡು ಕೆಂಡಾಮಂಡಲವಾದರು. ಜಿಲ್ಲಾಧಿಕಾರಿ ದೂರವಾಣಿ ಮೂಲಕ ಮಾತನಾಡಿ, ಅಧಿಕಾರಿಗಳ ನಿಷ್ಕಾಳಜಿ ಬಗ್ಗೆ ತಿಳಿಸಿ, ಕೂಡಲೇ ಶಿಸ್ತುಕ್ರಮ ಜರುಗಿಸುವಂತೆ ಆದೇಶಿಸಿದರು.

ಬೆಳಗ್ಗೆ ಸಾಮಾನ್ಯ ಜನರಂತೆ ಕಂದಾಯ ಇಲಾಖೆಗೆ ಬಂದ ಶಾಸಕ ಪ್ರಭು ಚವ್ಹಾಣ್ ಕಚೇರಿಯಲ್ಲಿ ಸುತ್ತಾಡಿ ಮುಖ್ಯದ್ವಾರದ ಮುಂದೆ ತಹಸೀಲ್ದಾರ್ ಜತೆಗೆ ಖುರ್ಚಿ ಹಾಕಿಕೊಂಡು ವಿಳಂಬವಾಗಿ ಬಂದ ಇಲಾಖೆ ಅಧಿಕಾರಿಗಳ ಹುದ್ದೆ ಬಗ್ಗೆ ಮಾಹಿತಿ ಪಡೆದರು.

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ವಿಳಂಬ ಮಾಡಿದ ೩೫ ಸಿಬ್ಬಂದಿಯ ಒಂದು ದಿನದ ವೇತನ ತಡೆಯುವಂತೆ, ಕಾರಣ ಕೇಳಿ ನೋಟಿಸ್ ನೀಡುವಂತೆ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಸೂಚನೆ ನೀಡಿದರು.

ಈ ವೇಳೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಧಿಕಾರಿಗಳು ಸೋಮಾರಿಗಳಾಗಿದ್ದು, ಪ್ರತಿ ಕೆಲಸಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಸಕಾಲಕ್ಕೆ ಕೆಲಸ ಮಾಡಿಕೊಡದ ಕಡತಗಳನ್ನು ಪರಿಶೀಲಿಸಿದ್ದು, ಎಲ್ಲ ಕೆಲಸಗಳನ್ನು ಕಾನೂನು ಪ್ರಕಾರ ಮಾಡಿಕೊಡಬೇಕು. ಇಲ್ಲದಿದ್ದರೆ ಜನರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಚೇರಿಯಲ್ಲಿ ಸ್ವಚ್ಛತೆ ಹಾಗೂ ಸಿಬ್ಬಂದಿಗಳ ಮೇಲೆ ನಿಯಂತ್ರಣ ಇಟ್ಟು ಕೆಲಸ ಮಾಡಿ ಎಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು. ಇಲಾಖೆಯಲ್ಲಿ ಎಲ್ಲ ತಪ್ಪುಗಳನ್ನು ಸರಿ ಪಡಿಸಿಕೊಳ್ಳುತ್ತೇನೆ. ಇನ್ನು ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ಜಾಗೃತೆಯಿಂದ ಕೆಲಸ ಮಾಡುವುದಾಗಿ ತಹಸೀಲ್ದಾರ್ ಚಿದ್ರೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net