ಸಮಯ ಕಸಿದಿರುವ ಧಾರಾವಾಹಿ

Vichar sankiran
Published on

ಬೀದರ್: ಧಾರಾವಾಹಿಗಳು ಮಹಿಳೆಯರ ಸಮಯ ಕಸಿದುಕೊಳ್ಳುತ್ತಿವೆ. ಟಿವಿ ನೋಡುವುದು ತಪ್ಪಲ್ಲ. ಆದರೆ ಅದೇ ಚಟವಾಗಬಾರದು ಎಂದು ಭಾಲ್ಕಿ ಚನ್ನಬಸವೇಶ್ವರ ಪದವಿ ಕಾಲೇಜಿನ ಗಣಿತ ವಿಭಾಗ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಹೇಳಿದರು.

ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕೃತಿಕ ಸಂಘದಿಂದ ನಗರದ ಗುಮ್ಮೆ ಕಾಲನಿಯಲ್ಲಿ ಸೋಮವಾರ ಸಂಜೆ ಆಯೋಜಿಸಿದ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ, ಮಹಿಳೆಯರು ಧಾರಾವಾಹಿ ವೀಕ್ಷಣೆ ಬದಲಾಗಿ ಕುಟುಂಬದ ನಿರ್ವಹಣೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಇದು ಉತ್ತಮ ಕುಟುಂಬಕ್ಕಾಗಿ ಇಂದಿನ ಅಗತ್ಯ ಎಂದರು.

ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಮಾತನಾಡಿ, ಪ್ರಸ್ತುತ ಮಹಿಳೆಯರು ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದ ಗಡಿ ರಕ್ಷಣೆಯಲ್ಲಿ ಮಹಿಳಾ ಸೇನಾನಿಗಳ ಸೇವೆ ಶ್ಲಾಘನೀಯ ಎಂದರು.

ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಉದ್ಘಾಟಿಸಿದರು. ರಾಜ್ಯ ಸಹಕಾರ ಮಹಿಳಾ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿದರು. ಶ್ರೀ ವೈಷ್ಣೋದೇವಿ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಾಂಡುರಂಗ ಪಾಂಚಾಳ, ಮಹೇಶ ಮಜಗೆ, ಸಂತೋಷ ಬೆಲ್ದಾಳೆ, ರಾಜಕುಮಾರ ಕಾಡವಾದ, ದೀಪಕ ಗಾದಗಿ, ಗುರುನಾಥ ಬಿರಾದಾರ ಇದ್ದರು. ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಂಸ್ಕೃತಿ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ವೈಜಿನಾಥ ಸಜ್ಜನಶೆಟ್ಟಿ ಹಾಸ್ಯ ರಸಮಂಜರಿ ನಡೆಸಿಕೊಟ್ಟರು. ಸುಭಾಷ ಬಿರಾದಾರ ಸ್ವಾಗತಿಸಿದರು. ಸಿದ್ರಾಮಯ್ಯ ಸ್ವಾಮಿ ನಿರೂಪಣೆ ಮಾಡಿದರು. ಗೀತಾ ಪಾಟೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net