

ಸಿಂಧನೂರು: ತಾಲೂಕು ವ್ಯಾಪ್ತಿಯಲ್ಲಿ ಚತುಷ್ಪಥ ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಚತುಷ್ಪಥ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೋಮವಾರ ಮಾತನಾಡಿದರು. ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಯಾಪಲಪರ್ವಿಯಿಂದ ಸಿಂಧನೂರುವರೆಗೆ ಜಲಜೀವನ್ ಮಿಷನ್, ಜಲಧಾರಾ ಸೇರಿದಂತೆ ವಿವಿಧ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್‌ಗಳ ಕುರಿತು ಗಮನಹರಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸಬೇಕು. ಬಹುಕೋಟಿ ವೆಚ್ಚದ ಕಾಮಗಾರಿ ಎಲ್ಲ ಇಲಾಖೆ ಅಧಿಕಾರಿಗಳ ಸಮನ್ವಯದಿಂದ ನಡೆಯಬೇಕು. ಸದ್ಯ ಭತ್ತ ನಾಟಿ ನಡೆದಿರುವುದರಿಂದ ರಸ್ತೆ ವಿಸ್ತರಣೆ ಕೆಲಸ ಆರಂಭಿಸಿದರೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೆಆರ್‌ಡಿಸಿಎಲ್ ಇಇ ಮುರುಳೀಧರ ಮಾತನಾಡಿ, ಸಿಂಧನೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕೈಗೊಳ್ಳದ ಬೇಕಾದ ಕಾಮಗಾರಿ ಕುರಿತಂತೆ ನೀಲಿನಕ್ಷೆ ಸಿದ್ಧಗೊಳ್ಳಬೇಕಿದೆ. ರಾಯಚೂರು ಮಾರ್ಗದಲ್ಲಿ 140 ಮೀಟರ್ 6 ಲೇನ್ ರಸ್ತೆ ಇರಲಿದ್ದು, ನಂತರ 4 ಲೇನ್ ರಸ್ತೆ ಮಾಡಲಾಗುವುದು ಎಂದು ತಿಳಿಸಿದರು.
ಆರ್‌ಡಬ್ಲ್ಯುಎಸ್ ಎಇಇ ವಿಜಯಲಕ್ಷ್ಮೀ ಮಾತನಾಡಿ, ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಪೈಪ್‌ಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು. ಜೆಸ್ಕಾಂ ಎಇಇ ಶ್ರೀನಿವಾಸ ಮಾತನಾಡಿ, ಕೆಆರ್‌ಡಿಸಿಎಲ್‌ನಿಂದ ಕೈಗೊಳ್ಳುತ್ತಿರುವ ಕಾಮಗಾರಿಗಾಗಿ ವಿದ್ಯುತ್ ಕಂಬ ಸ್ಥಳಾಂತರ, ಮರು ಜೋಡಣೆ ಹಾಗೂ ಇತರ ಕೆಲಸಕ್ಕಾಗಿ ಅಂದಾಜುಪಟ್ಟಿ ತಯಾರಿಸಿದ್ದು, 7.4 ಕೋಟಿ ರೂ. ಕಾಮಗಾರಿಗೆ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಸುರೇಶ ಮಾತನಾಡಿ, ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಪೋತ್ನಾಳದಿಂದ ಸಿಂಧನೂರುವರೆಗೆ 2677 ದೊಡ್ಡ ಮರ, 8125 ಸಣ್ಣ ಸಸಿಗಳನ್ನು ಗುರುತಿಸಿದ್ದು, ಈ ಗಿಡಗಳ ಹಣವನ್ನು ಕೆಆರ್‌ಡಿಸಿಎಲ್ ಅಧಿಕಾರಿಗಳು ಪಾವತಿಸಿದ್ದಾರೆ. ರಸ್ತೆ ಕಾಮಗಾರಿ ಆರಂಭಕ್ಕೆ ಅರಣ್ಯ ಇಲಾಖೆ ಅಭ್ಯಂತರ ಇಲ್ಲ ಎಂದರು.