

ಮೂಡಿಗೆರೆ: ಪ್ರಾಥಮಿಕ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ ಪಡೆದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸುಲಭವಾಗುತ್ತದೆ ಎಂದು ತಾಪಂ ಇಒ ದಯಾವತಿ ಹೇಳಿದರು.
ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಪಾಲಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಉತ್ತಮವಾಗಿವೆ. ವಿದ್ಯಾರ್ಥಿಗಳಿಗೆ ಎಲ್ಲ ಸವಲತ್ತುಗಳನ್ನು ಸರ್ಕಾರ ಕಾಲ ಕಾಲಕ್ಕೆ ಒದಗಿಸುತ್ತಿದೆ. ಪಾಲಕರಲ್ಲಿ ಸರ್ಕಾರಿ ಶಾಲೆ ಎಂಬ ತಾತ್ಸಾರ ಭಾವನೆ ಸರಿಯಲ್ಲ. ಗುಣಮಟ್ಟದ ಶಿಕ್ಷಣವನ್ನು ಮಕ್ಕಳು ಪಡೆಯುವ ಸಲುವಾಗಿ ಎಲ್ಲ ಪಾಲಕರೂ ಸರ್ಕಾರಿ ಶಾಲೆಯನ್ನು ಪ್ರೋತ್ಸಾಹಿಸಬೇಕು. ಹಾಗಾದರೆ ಮಾತ್ರ ವಿದ್ಯಾರ್ಥಿಗಳು ಉಚಿತವಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿ ಸುಂದರೇಶ್ ಮಾತನಾಡಿ, ದೇಶದ ಅತ್ಯುನ್ನತ ಚುಕ್ಕಾಣಿ ಹಿಡಿದವರು, ಮಹಾತ್ಮರು, ಅಧಿಕಾರಿಗಳು, ಪ್ರತಿಷ್ಠಿತ ರಾಜಕಾರಣಿಗಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಈಗ ಶಿಕ್ಷಣ ಆಧುನಿಕ ವ್ಯವಸ್ಥೆಯತ್ತ ಸಾಗಿದ್ದರಿಂದ ಅದಕ್ಕನುಗುಣವಾಗಿ ಶಿಕ್ಷಣ ಇಲಾಖೆ, ವ್ಯವಸ್ಥೆಗೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡಲು ಮುಂದೆಬಂದಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಯಾಸ್ಮಿನ್ ಸುಲ್ತಾನಾ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಯಶಸ್ವಿಯಾಗಿವೆ ಎಂದರು.
ಎಸ್‌ಟಿಎಂಸಿ ಅಧ್ಯಕ್ಷೆ ಸಮೀನಾ ಭಾನು, ಶಿಕ್ಷಣ ಇಲಾಖೆ ಅಧಿಕಾರಿ ರುದ್ರೇಶ್, ಶಿಕ್ಷಕರಾದ ಕೆ.ಆರ್.ತೋಟಪ್ಪ, ಡಿ.ಪಿ.ಭಾರತಿ ಇತರರಿದ್ದರು.