

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ಸಂಬಂಧ ಸಮಗ್ರ ವರದಿ ಕೈಸೇರಿದ ಬಳಿಕವೇ ಬರವೆಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಘಟನೆ ಮುಖಂಡರು, ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಮಳೆ-ಬೆಳೆ ವಾಸ್ತವ ಸ್ಥಿತಿ ಕುರಿತು ಅಧ್ಯಯನ ತಂಡ ಪರಿಶೀಲಿಸಿ ವರದಿ ನೀಡಲಿದ್ದು, ಆ ನಂತರವೇ ಬರಗಾಲ ಉಂಟಾಗಿದೆಯೋ, ಇಲ್ಲವೋ ಎಂದು ತೀರ್ಮಾನಿಸಲು ಸಾಧ್ಯ. ಬಯಲುಸೀಮೆ ರೈತರು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಕಾಳಜಿ ಇದೆ ಎಂದರು.
ಜಿಲ್ಲಾದ್ಯಂತ ಕೃಷಿಗಾಗಿ ರಾತ್ರಿ ವೇಳೆ ನೀಡುತ್ತಿದ್ದ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವ ವಿಷಯ ಗಮನಕ್ಕೆ ಬಂದಿದೆ. ಗ್ರಿಡ್‌ಗಳಿಂದ ಸರಬರಾಜು ಆಗುವ ವಿದ್ಯುತ್‌ನಲ್ಲಿ ತುಸು ವ್ಯತ್ಯಾಸವಾಗಿದೆ. ಶೀಘ್ರ ಸರಿಪಡಿಸುವ ಕುರಿತು ಬೆಸ್ಕಾಂ ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹರಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದರು.
ಮುಂಗಾರು ಮಳೆ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟಿದೆ. ಒಣ ಹವೆ ಮುಂದುವರಿದಿದ್ದು, ಉತ್ತಮವಾಗಿ ಹುಟ್ಟುವಳಿಯಾಗಿದ್ದ ಎಲ್ಲ ಫಸಲು ಬಿಸಿಲಿನ ಜಳಕ್ಕೆ ಬಾಡಿವೆ. ಈಗ ಮಳೆ ಬಂದರೂ ಯಾವ ಪ್ರಯೋಜನವಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ ಎಂದು ಘೋಷಿಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಮುಂಗಾರು ಕೈ ಕೊಟ್ಟ ಪರಿಣಾಮ ರೈತರು ಕೈಯಲ್ಲಿದ್ದ ಹಣವನ್ನೆಲ್ಲ ಕೃಷಿ ಚಟುವಟಿಕೆಗೆ ಸುರಿದು ಕಂಗಾಲಾಗಿದ್ದಾರೆ. ಈ ನಡುವೆ ಗ್ರಾಮೀಣ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ಮುಂದಾಗಿವೆ. ಆದ್ದರಿಂದ ನೋಟೀಸ್ ಜಾರಿ ಮಾಡದಂತೆ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಿಬೇಕು. ರೈತರ ಎಲ್ಲ ಸಾಲ ಮನ್ನ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ಜಿಲ್ಲೆಯ ರೈತರು ಬೆಸ್ಕಾಂಗೆ ಹಣ ಪಾವತಿಸಿದ್ದಾರೆ. ಆದರೆ, ಕಂಬ, ತಂತಿ ನೀಡದೆಯೆ ಸತಾಯಿಸಲಾಗುತ್ತಿದೆ. ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ರೈತರು ರೋಸಿ ಹೋಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ ಹೈರಾಣಾಗಿದ್ದಾರೆ. ಬೆಸ್ಕಾಂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಯೋಜನೆಯಡಿ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಿ ಎಂದು ಕೋರಿದರು.
ರೈತ ಸಂಘದ ಮುಖಂಡರಾದ ಈಚಘಟ್ಟದ ಸಿದ್ಧವೀರಪ್ಪ, ಕೆ.ಪಿ.ಭೂತಯ್ಯ, ಬ್ಯಾಡರಹಳ್ಳಿ ಶಿವಕುಮಾರ್, ಕೆ.ಸಿ.ಹೊರಕೇರಪ್ಪ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಹಂಪಯ್ಯನಮಾಳಿಗೆ ಧನಂಜಯ, ಮಲ್ಲಾಪುರದ ತಿಪ್ಪೇಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಇತರರಿದ್ದರು.