

ವಿಜಯವಾಣಿ ಸುದ್ದಿಜಾಲ ಮೈಸೂರು
ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಒಕ್ಕಲಿಗ ತನ್ನ ವ್ಯವಸಾಯದ ವಿಧಾನ ಬದಲಿಸಿಕೊಳ್ಳಲು ಸೋಪಾನ. ‘ಸಮಗ್ರ ಕೃಷಿಯ ಯುಕ್ತಿ, ಲಾಭದಾಯಕ ಬೇಸಾಯದ ಶಕ್ತಿ’ ಎಂಬ ಪ್ರಮುಖ ಸಂದೇಶ ಸಾರುವುದರೊಂದಿಗೆ ಮೂರು ದಿನಗಳ ಕೃಷಿ ಮೇಳ ಶುಕ್ರವಾರ ಅರ್ಥಪೂರ್ಣ ಆರಂಭ ಕಂಡಿತು.
ಬಹು ಕೃಷಿ ಪದ್ಧತಿ ತೊಟ್ಟಿಲು ಎಂದೇ ಗುರುತಿಸಿಕೊಂಡ ಹಳೇ ಮೈಸೂರು ಪ್ರಾಂತ್ಯದ ಕೇಂದ್ರಸ್ಥಾನ, ಸಾಂಸ್ಕೃತಿಕ ನಗರಿ ಎಂದೇ ಹೆಸರಾದ ಮೈಸೂರು ಮತ್ತೊಂದು ಮಹತ್ವದ ವಿದ್ಯಮಾನಕ್ಕೆ ಸಾಕ್ಷಿಯಾಯಿತು.
‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಪರಿಕಲ್ಪನೆಯಡಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ವಿಜಯವಾಣಿ ಹಾಗೂ ದಿಗ್ವಿಜಯ ಸಾರಥ್ಯದಲ್ಲಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕೃಷಿ ಮೇಳ ನಡೆಯಲಿದ್ದು, ಅನ್ನದಾತರಿಗೆ ಸುಸ್ಥಿರತೆಯ ಮಾರ್ಗಪಥ ಹಾಕಿಕೊಡುವ ಮುನ್ಸೂಚನೆ ನೀಡಿತು.
ಅನಾವರಣ
ಕರೋನೋತ್ತರ ಕಾಲಘಟ್ಟದಲ್ಲಿ ಉದ್ಯಮ-ವಹಿವಾಟು ವೃದ್ಧಿ, ಆರ್ಥಿಕತೆ ಚೇತರಿಕೆ, ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಳಕ್ಕೆ ಕೃಷಿಯೇ ಮೂಲದ್ರವ್ಯವೆಂಬುದು ಕೃಷಿ ಮೇಳದ ಮೊದಲ ದಿನವೇ ನಿಚ್ಚಳವಾಯಿತು.
ಮಣ್ಣು ಸಂರಕ್ಷಣೆಯಿಂದ ಹಿಡಿದು ಮಾರುಕಟ್ಟೆ ಜ್ಞಾನ, ಜಲಸಂಪತ್ತು ಸದ್ಬಳಕೆ, ಮಿಶ್ರಬೆಳೆ, ಆಧುನೀಕರಣ, ಯಾಂತ್ರೀಕರಣ, ದಾಸ್ತಾನು, ಮೌಲ್ಯವರ್ಧನೆ, ಹೊಸ ಸಂಶೋಧನೆ, ಆವಿಷ್ಕಾರಗಳು, ಸಹಜ, ಸಾವಯವ, ಯೋಗಿಕ್, ನಿಖರ ಬೇಸಾಯ ತರಹೇವಾರಿ ಪದ್ಧತಿ, ಹೊಸತು ಅನಾವರಣಗೊಂಡಿತು.
ಪಶುಸಂಗೋಪನೆ, ಮೀನುಗಾರಿಕೆ, ಕುರಿ ಸಾಕಣೆ, ರಾಸುಗಳ ಹೊಸ ತಳಿಗಳು- ಅವುಗಳ ವೈಶಿಷ್ಟೃ ತಿಳಿದುಕೊಳ್ಳಲು ಅನುಭವಿ, ಪ್ರಗತಿಪರ ರೈತರ ಜತೆಗೆ ಯುವಜನರ ಆಸಕ್ತಿ, ಕೃಷಿಯೆಡೆಗಿನ ಹಂಬಲವನ್ನು ಎತ್ತಿ ತೋರಿಸಿತು. ವಿಚಾರಗೋಷ್ಠಿಗಳು ಗಹನವಾದ ವಿಷಯಗಳನ್ನು ಮೊಗೆದು ಕೊಟ್ಟರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ದಣಿದ ಮನಗಳನ್ನು ಉಲ್ಲಸಿತಗೊಳಿಸಿದವು.
ವಿವಿಧ ಪ್ರದರ್ಶನ ಮಳಿಗೆಗಳಲ್ಲಿ ಪ್ರಗತಿಪರ ರೈತರು, ಕೃಷಿ ತಾಂತ್ರಿಕ ತಜ್ಞರು, ಉದ್ಯಮ-ವ್ಯಾಪಾರಿಗಳು ನೀಡುವ ಮಾಹಿತಿ, ಹಲವು ಬಗೆಯ ಉತ್ಪನ್ನಗಳು, ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆದ ತಂತ್ರಗಳು ಕಂಡುಂಡವರಿಗೆ ಕೃಷಿ ಲಾಭದಾಯಕವೂ ಹೌದು, ಸುಸ್ಥಿರ ಅಭಿವೃದ್ಧಿಯೂ ಸಾಧ್ಯವೆಂಬ ಭರವಸೆ ಕಟ್ಟಿಕೊಟ್ಟಿತು.
ಹುಮ್ಮಸ್ಸು ತುಂಬಿದ ಸಿಎಂ:
ಮೈದಾನದಲ್ಲಿ ಮೈದಳೆದ ಮಳಿಗೆಗಳು ಕೃಷಿಯ ಒಟ್ಟೂ ಸಾಧನೆ, ಸಾಧ್ಯತೆಗಳನ್ನು ತೆರೆದಿಟ್ಟರೆ, ಸರ್ಕಾರದ ನೀತಿ-ನಿರ್ಧಾರಗಳು ರೈತರ, ಕೃಷಿ ಬೆಳವಣಿಗೆಗೆ ಸದಾ ಒತ್ತಾಸೆ ನೀಡುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ನೆರೆದ ಜನಸಮೂಹದಲ್ಲಿ ಹುಮ್ಮಸ್ಸು ತುಂಬಿದರು.
ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ತಲೆದೋರಿದೆ. ಬಲಾಢ್ಯ ರಾಷ್ಟ್ರಗಳು ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದರೆ, ಭಾರತ ಆಹಾರ ಭದ್ರತೆ ಸಾಧಿಸುವುದಕ್ಕೆ ಅನ್ನದಾತರು ಆಧಾರ ಸ್ತಂಭ. ಸರ್ಕಾರದ ನೀತಿ-ನಿರ್ಧಾರಗಳು ಕಾರಣವೆಂದು ಹೇಳುವ ಮೂಲಕ ಕೃಷಿ ಮಹತ್ವದತ್ತ ಗಮನ ಸೆಳೆದರು.
ಬಾಕ್ಸ್…….
ಕಳೆಗಟ್ಟಿದ ಮುನ್ನುಡಿ
ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯು ಮೂರು ದಿನಗಳ ಕೃಷಿ ಮೇಳಕ್ಕೆ ಮುನ್ನುಡಿಯಾಗಿ ಕಳೆಗಟ್ಟಿಸಿತು. ನಗರದ ಸುಣ್ಣದಕೇರಿ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಚಾಲನೆ ಪಡೆಯಿತು. ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯ ಸದ್ದು ಜನರ ಗಮನ ಸೆಳೆಯಿತು. ಡೊಳ್ಳು, ಹಲಗೆ, ನಂದಿಕೋಲು, ಪೂಜಾಕುಣಿತದ ಜತೆಗೆ ಅಲಂಕೃತ ಹಳ್ಳಿಕಾರ ‘ಬಸವ’ ಆಕರ್ಷಣೆಯ ಕೇಂದ್ರಬಿಂದುವಾಯಿತು. ಕುಂಭ, ಕಳಸ ಹಿಡಿದ ಮಹಿಳೆಯರು, ಶ್ವೇತವಸ್ತ್ರ ಧರಿಸಿ ಹೆಗಲ ಮೇಲೊಂದು ಹಸಿರು ಶಾಲು ಹೊದ್ದ ಸ್ವಯಂ ಸೇವಕರ ಸರತಿ ಸಾಲು ಸೊಬಗು ಹೆಚ್ಚಿಸಿತಲ್ಲದೆ, ಕೃಷಿಯಲ್ಲಿ ಖುಷಿಯಿದೆ, ಸಂಸ್ಕೃತಿಯಿದೆ ಎನ್ನುವುದಕ್ಕೆ ಕೈಗನ್ನಡಿಯಾಯಿತು.
ಬಾಕ್ಸ್……
ಮತ್ತೆ ಬೆಸೆದ ಬಂಧ
‘ಈ ಬಾರಿಯೂ ಮತ್ತೆ ಬಂದೀರೇನ್ರಿ, ನಾವೆಲ್ಲಿ ಮರೆತು ಬಿಟ್ರೇನು ಅಂದ್ಕೊಂಡಿದ್ವಿ’ ಎಂದು ತಿ.ನರಸೀಪುರದ ರೈತ ರವಿ ಕುತೂಹಲದ ಕಣ್ಣರಳಿಸಿ ಮಳಿಗೆಗಳತ್ತ ಒಮ್ಮೆ ನೋಡಿ ಸಂತೋಷ ವ್ಯಕ್ತಪಡಿಸಿದ ಪರಿಯೇ ಕೃಷಿ ಮೇಳದ ಬಂಧ ಮತ್ತೆ ಬೆಸೆಯಿತು ಎಂಬುದನ್ನು ಧ್ವನಿಸಿತು.
ಮೂರು ದಿನಗಳ ಕೃಷಿ ಮೇಳ ಹೊಸ ಪ್ರಯೋಗ, ಹೊಸ ಸಾಹಸ 2020ರ ಫೆಬ್ರವರಿಯಲ್ಲಿ ಯಶಸ್ವಿಯಾಗಿತ್ತು. ನಂತರ ವಕ್ಕರಿಸಿದ ಕರೊನಾದಿಂದಾಗಿ ಪ್ರತಿ ವರ್ಷ ಮೇಳ ಏರ್ಪಡಿಸುವ ಯೋಚನೆ ಸಾಕಾರವಾಗಲಿಲ್ಲ. ಮೂರು ವರ್ಷಗಳ ಬಳಿಕ ಆಯೋಜಿಸಿರುವ ಕೃಷಿ ಮೇಳಕ್ಕೆ ರೈತಾಪಿ ವರ್ಗ ಅದೇ ಅಪ್ಯಾಯತೆ, ಅಪಾರ ನಿರೀಕ್ಷೆಯೊಂದಿಗೆ ಸ್ಪಂದಿಸಿದೆ.
ಬಾಕ್ಸ್……
ಅಪ್ಪಟ ದೇಸಿ ಬಿಂಬ
ಕೃಷಿ ಮೇಳ ಉದ್ಘಾಟನಾ ಸಮಾರಂಭದ ವೇದಿಕೆ ಮುಂಬದಿ ರಾಗಿ ರಾಶಿ, ವಾಡೆ ಅಲಂಕಾರ. ಭತ್ತ, ಕಬ್ಬು, ರಾಗಿ ಸಸಿ ಮಾದರಿ ನಾಟಿ, ರಾಗಿ ಮತ್ತು ಭತ್ತ ರಾಶಿ ಮಾಡುವ ಮೂಲಕ ಸಿಎಂ ಆದಿಯಾಗಿ ಗಣ್ಯರು ಉದ್ಘಾಟಿಸಿದರು. ಇದೇ ವೇಳೆ ಬೊಮ್ಮಾಯಿ ಅವರು ಹೊಂಬಾಳೆಯನ್ನು ಬಿಡಿಸಿಟ್ಟರು. ಒಟ್ಟಾರೆ ಉದ್ಘಾಟನಾ ಕಾರ್ಯಕ್ರಮವು ಅಪ್ಪಟ ದೇಸಿ ಬೇಸಾಯವನ್ನು ಬಿಂಬಿಸಿತು.
ಕೋಟ್…..
ವಿಆರ್‌ಎಲ್ ಸಮೂಹ ಸಂಸ್ಥೆಗಳ ಡಾ.ವಿಜಯ ಸಂಕೇಶ್ವರ ಅವರು ರೈತರ ಬಗ್ಗೆ ಹೊಂದಿದ ಕಳಕಳಿ ಅನನ್ಯ. ಅದೇ ಹಾದಿಯಲ್ಲಿ ಪುತ್ರ ಡಾ.ಆನಂದ ಸಂಕೇಶ್ವರ, ಮೊಮ್ಮಗ ಶಿವ ಸಂಕೇಶ್ವರ ಸಾಗಿದ್ದಾರೆ. ಅನ್ನದಾತರ ಬದುಕು ಹಸನಾಗಿಸಲು ಉದ್ದೇಶಿತ ಮೂರು ದಿನಗಳ ಕೃಷಿ ಮೇಳ ಯಶಸ್ವಿಯಾಗಲಿ. ರೈತರು ಉಪಯುಕ್ತ ಮಾಹಿತಿ ಪಡೆದು, ಬೇಕಾಗಿರುವುದನ್ನು ಖರೀದಿಸಲಿ. ವಿಆರ್‌ಎಲ್ ಟೀಂನ ಶ್ರಮ ಸಾರ್ಥಕವಾಗಲಿ.
ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ
ಕೋಟ್……..
ಜನರ ಧ್ವನಿಯಾಗಿ ನಾಡಿನ ನಂ.1 ಪತ್ರಿಕೆಯಾಗಿ ವಿಜಯವಾಣಿ ಬೆಳೆದಿದೆ. ಅದೇ ರೀತಿ ದಿಗ್ವಿಜಯ ನ್ಯೂಸ್ ಜನಪರ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಸುದ್ದಿ ಪ್ರಕಟ, ಪ್ರಸಾರದ ಜತೆಗೆ ರೈತರ ಬಗ್ಗೆ ಕಾಳಜಿಯಿಟ್ಟುಕೊಂಡು ಕೃಷಿ ಮೇಳ ಸಂಘಟಿಸಿರುವುದು ಸಮಾಜಮುಖಿ ಕೆಲಸವಾಗಿದೆ. ಮಹತ್ವದ ಸುಧಾರಣೆಗಳನ್ನು ತರುವ ಮೂಲಕ ಕೃಷಿಕರಿಗೆ ಅನುಕೂಲವಂತಹ ಹತ್ತಾರು ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಆರ್.ಅಶೋಕ್
ಕಂದಾಯ ಸಚಿವ
ಕೋಟ್……
ನಮಗೆ ನಿತ್ಯವೂ ಮೂರು ಊಟ, ಮೈತುಂಬಾ ಬೇಕಾದ ಬಟ್ಟೆ ಧರಿಸಿಕೊಳ್ಳಲು ರೈತರೇ ಕಾರಣ. ರೈತರು ನಮ್ಮ ಬದುಕಿಗೆ ಆಸರೆ ಮಾತ್ರವಲ್ಲ, ದೇಶದ ನಿವ್ವಳ ಉತ್ಪನ್ನ ದರ (ಜಿಡಿಪಿ)ದಲ್ಲಿ ಶೇ.25ರಷ್ಟು ಪಾಲು ನೀಡುತ್ತಿದ್ದಾರೆ. ವಿವಿಧ ಎಕ್ಸ್‌ಪೋಗಳಿಗಿಂತ ಕೃಷಿ ಮೇಳ ವಿಭಿನ್ನವಾಗಿದೆ. ಕಳೆದ ಬಾರಿ ದೊರೆತ ಸ್ಪಂದನೆ ಮತ್ತೊಮ್ಮೆ ಆಯೋಜಿಸಲು ಪ್ರೋತ್ಸಾಹಿಸಿದೆ. ರೈತರು ಪಾಲ್ಗೊಂಡು ಮೇಳದ ಸದ್ಬಳಕೆ ಮಾಡಿಕೊಳ್ಳಬೇಕು.
ಶಿವ ಸಂಕೇಶ್ವರ
ವ್ಯವಸ್ಥಾಪಕ ನಿರ್ದೇಶಕ, ವಿಜಯಾನಂದ ಟ್ರಾವೆಲ್ಸ್ ಲಿಮಿಟೆಡ್