ಸಮಗ್ರ ಬೇಸಾಯದಲ್ಲಿ ನೆಮ್ಮದಿ ಬದುಕು

30rajesh2
Published on

ಚಾಮರಾಜನಗರ: ಕೃಷಿಯಲ್ಲಿ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ದಂಪತಿಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ.

ತಾಲೂಕಿನ ಕೋಡಿಉಗನೆ ಗ್ರಾಮದ ಪುಟ್ಟಸುಂದರ ಮತ್ತು ರಾಧ ದಂಪತಿಗಳು ಗ್ರಾಮದಲ್ಲಿರುವ ಸ್ವಂತ 5 ಎಕರೆ ಜಮೀನಿನಲ್ಲಿ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಇನ್ನಿತರೆ ಕೃಷಿಕರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಇರುವ 5 ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ತರಕಾರಿ, ಚೆಂಡುಮಲ್ಲಿಗೆ, ನುಗ್ಗೆ, ಮರಗೆಣಸು ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯುವ ಮೂಲಕ ಬೇಸಾಯದಲ್ಲಿ ಲಾಭವನ್ನು ಕಾಣುತ್ತಿದ್ದಾರೆ. ಇದರ ಜತೆಗೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿರುವ ದಂಪತಿಗಳು 8-10 ಹಸುಗಳು, ತಲಾ 2 ಕುರಿ ಮತ್ತು ಮೇಕೆ, ನಾಟಿಕೋಳಿ, ಟೆರಿಕ್, ಬಾತು ಕೋಳಿಗಳನ್ನು ಸಹ ಸಾಕಿಕೊಂಡಿದ್ದಾರೆ.

ಹೈನುಗಾರಿಕೆಯಿಂದ ದಿನಕ್ಕೆ 30-35 ಲೀ ಹಾಲು ಮಾರಾಟ ಮಾಡುತ್ತಾರೆ. ಗೊಬ್ಬರ ಮತ್ತು ಗಂಜಲವನ್ನು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಮೀನಿನಲ್ಲಿ ಬೃಹತ್ ಕೃಷಿಹೊಂಡ ಮತ್ತು ಪಾಚಿತೊಟ್ಟಿಯನ್ನು ನಿರ್ಮಿಸಿ ಮೀನು ಸಾಕಾಣಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ದಂಪತಿಗಳು ಮರಗೆಣಸು ಬೆಳೆಯಲು ವಿಶೇಷ ಆಸಕ್ತಿ ತೋರುತ್ತಿದ್ದು, ಸರ್ಕಾರ ಕೃಷಿಕರಿಗೆ ನೀಡುವ ಸಾಲಸೌಲಭ್ಯಗಳವನ್ನು ಸದ್ಭಳಕೆ ಮಾಡಿಕೊಂಡು ಹೈನುಗಾರಿಕೆ, ತರಕಾರಿ ಹಾಗೂ ಇನ್ನಿತರೆ ಮೂಲಗಳಿಂದ ಹೆಚ್ಚಿನ ಸಂಪಾದನೆಯನ್ನು ಮಾಡುತ್ತಿದ್ದಾರೆ. ಈ ಮೂಲಕ ಸಮಗ್ರ ಬೇಸಾಯದ ಮಹತ್ವವನ್ನು ಸಾರುತ್ತಿದ್ದಾರೆ.

ಕಳೆ ಔಷಧಿ ನಿಷಿದ್ಧ:

ಪುಟ್ಟಸುಂದರ ಮತ್ತು ರಾಧ ದಂಪತಿಗಳು ತಮ್ಮ ಜಮೀನಿನಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳದೇ ಇದ್ದರೂ, ಅನಿವಾರ್ಯ ಇದ್ದಾಗ ಮಾತ್ರ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಆದರೆ ಹೈನುಗಾರಿಕೆಯಿಂದ ದೊರೆಯುವ ಗೊಬ್ಬರ ಹಾಗೂ ಗಂಜಲವನ್ನು ನೇರವಾಗಿ ಜಮೀನಿಗೆ ಹೋಗುವ ವ್ಯವಸ್ಥೆ ಮಾಡಿದ್ದಾರೆ. ಭೂಮಿಯ ಲವತ್ತತೆ ಹಾಗೂ ಆರೋಗ್ಯ ಕಪಾಡಲು, ರೈತಮಿತ್ರ ಎರೆಹುಳು ಸಾಯದಂತೆ ನೋಡಿಕೊಳ್ಳಲು ಸಂಪೂರ್ಣವಾಗಿ ಕಳೆ ಔಷಧಿ ಬಳಕೆಯಿಂದ ದೂರವಿದ್ದಾರೆ. ಇದರ ನಡುವೆ ಜಮೀನಿನ ತೆವರುಗಳ ಮಗ್ಗಲಿನಲ್ಲಿ ಅಂತರ್ಜಲ ಹೆಚ್ಚಿಸುವ ಸಲುವಾಗಿ ಕಂದಕ ಬದುಗಳ ನಿರ್ಮಾಣ ಮಾಡಿದ್ದಾರೆ. ಅದಲ್ಲದೇ ಸುಮಾರು 3 ಮೀ.ಆಳ ಹಾಗೂ 21 ಮೀ. ಅಗಲ ಮತ್ತು ಉದ್ದವಿರುವ ಕೃಷಿ ಹೊಂಡದಲ್ಲಿ ಮೀನುಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಕಾಟ್ಲಾ, ರೋಹು ಹಾಗೂ ಜಿಲೇಬಿ ತಳಿಯ ಮೀನುಗಳನ್ನು ಬಿಟ್ಟಿದ್ದಾರೆ. ಎರೆಹುಳು ಘಟಕ ಹಾಗೂ ಪಾಚಿತೊಟ್ಟಿಯನ್ನು ನಿರ್ಮಾಣ ಮಾಡಿದ್ದು, ಪ್ರಯೋಗಾತ್ಮಕ ಬೇಸಾಯದಲ್ಲಿ ತೃಪ್ತಿಯನ್ನು ಕಾಣುತ್ತಿದ್ದಾರೆ.

ಜೇನು ಸಾಕಾಣೆಗೂ ಮುಂದು:

ದಂಪತಿಗಳು ಜಮೀನಿನಲ್ಲಿ ಜೇನು ಸಾಕಾಣೆಗೂ ಮುಂದಾಗಿದ್ದು, ಸುಮಾರು 10-12 ಜೇನು ಪೆಟ್ಟಿಗೆಗಳನ್ನು ಇರಿಸಿದ್ದಾರೆ. ಇದರಿಂದ ಪ್ರತ್ಯೇಕವಾಗಿ ಲಾಭವನ್ನೇನು ನಿರೀಕ್ಷೆ ಮಾಡದೇ ತೆಂಗು ಮತ್ತು ಇನ್ನಿತರೆ ಬೆಳೆಗಳ ಇಳುವರಿ ಹೆಚ್ಚಳಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅದರಂತೆ ತೆಂಗು, ತರಕಾರಿ ಹಾಗೂ ಇನ್ನಿತರೆ ಬೆಳೆಗಳನ್ನು ಶೇ.25 ರಷ್ಟು ಹೆಚ್ಚು ಇಳುವರಿಯನ್ನು ಕಾಣುತ್ತಿದ್ದಾರೆ. ಅದಲ್ಲದೇ ಮರಗೆಣಸು ಬೆಳೆಗೂ ವಿಶೇಷವಾದ ಆದ್ಯತೆ ನೀಡುತ್ತಿದ್ದಾರೆ. ಮರಗೆಣಸು ಕಡಿಮೆ ಖರ್ಚಿನಲ್ಲಿ ಬೆಳೆಯುವಂತ ಬೆಳೆಯಾಗಿದ್ದು, ಸಾವಯವ ಮಾದರಿಯಲ್ಲಿ ಬೆಳೆದರೆ ಆರೋಗ್ಯದ ದೃಷ್ಠಿಯಿಂದ ಉತ್ತಮ ಬೆಳೆಯಾಗಿದೆ. ಕೇರಳ ರಾಜ್ಯದಲ್ಲಿ ಇದನ್ನು ಆಹಾರವಾಗಿ ಹೆಚ್ಚು ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ 500-600 ಜನರಿಗೆ ಉಚಿತವಾಗಿ ಗೆಣಸು ಕಡ್ಡಿಗಳನ್ನು ನೆಟ್ಟಿದ್ದು, ಅರಿಶಿಣ ಬೆಳೆಯಂತೆ ಮರಗೆಣಸು ಕೂಡ ವಾಣೀಜ್ಯ ಬೆಳೆಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ.

ಕೆವಿಕೆ ಸಹಕಾರಿ:

ಜಮೀನಿನಲ್ಲಿ ದೊರೆಯುವ ನೀರು ಮತ್ತು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಯಾವ ಬೆಳೆಗೆ ಎಷ್ಟು ಗೊಬ್ಬರವನ್ನು ನೀಡಬೇಕು ಎಂಬುದನ್ನು ತಿಳಿದುಕೊಳ್ಳಲು. ಯಾವ ಗಿಡ ಅಥವಾ ಬೆಳೆಗಳಿಗೆ ಯಾವ ಔಷಧವನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ತಿಳಿದುಕೊಳ್ಳಲು ಕೃಷಿ ವಿಜ್ಞಾನ ಕೇಂದ್ರ ಸಹಕಾರಿಯಾಗಿದೆ ಎಂದು ಕೃಷಿಕ ಪುಟ್ಟಸುಂದರ ಅವರು ಹೇಳುತ್ತಾರೆ. ಕೆವಿಕೆ ನೀಡುವ ಸೊಡೋಮೊನಸ್ ಮತ್ತು ಟ್ರೈಕೋಡರ್ಮ ಬಳಕೆಯಿಂದ ಮಣ್ಣಿನ ಲವತ್ತತೆ ಮತ್ತು ಇಳುವರಿ ಕೂಡ ಹೆಚ್ಚಾಗುತ್ತಿದೆ. ಕೆವಿಕೆ ವತಿಯಿಂದ ಆಯೋಜಿಸುವ ಹಲವಾರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಾವು ನಂಬಿಕೊಂಡಿರುವ ಸಮಗ್ರ ಬೇಸಾಯ ಪದ್ಧತಿಗೆ ಅನುಕೂಲವಾಗಿದೆ. ಕೆವಿಕೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನಗಳನ್ನು ನೀಡುವುದರಿಂದ ಬೇಸಾಯ ನಮಗೆ ಪ್ರಧಾನದ ಜತೆಗೆ ಲಾಭಬಾಯಕವೂ ಆಗಿದೆ ಎಂದು ಹೇಳುತ್ತಾರೆ.

ಸ್ವಂತ ಜಮೀನಿನಲ್ಲಿ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಕೃಷಿಯೇ ಆಧಾರವಾಗಿದೆ. ಇದರಿಂದ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದೇವೆ. ಪ್ರಸ್ತುತ ಸಂದರ್ಭದಲ್ಲಿ ಸಾವಯವ ಕೃಷಿ ಹಾಗೂ ಸಮಗ್ರ ಬೇಸಾಯ ಪದ್ಧತಿ ಸಹಕಾರಿಯಾಗಿದೆ. ಅದರಲ್ಲೂ ಕೃಷಿ ವಿಜ್ಞಾನ ಕೇಂದ್ರ ನೀಡುವ ಮಾಹಿತಿ ಅತ್ಯಂತ ಉಪಕಾರಿಯಾಗಿದೆ.

-ಪುಟ್ಟಸುಂದರ, ಕೃಷಿಕ, ಕೋಡಿಉಗನೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net