ಸಮಗ್ರ ನೀರಾವರಿಗಾಗಿ ಪಂಜಿನ ಮೆರವಣಿಗೆ

Meravanige
Published on

ಚಿತ್ರದುರ್ಗ: ಜಿಲ್ಲೆಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿರುವ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಆಳುವ ಸರ್ಕಾರಗಳು ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಪರಸ್ಪರ ದೂರುತ್ತ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ ಎಂದು ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು.

ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ನಿರಂತರ ಬರಗಾಲಕ್ಕೆ ಒಳಗಾಗುತ್ತಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರಾವರಿಯ ಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. 4 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ 15 ವರ್ಷ ಕಳೆದರೂ ಆಗಿಲ್ಲ. ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಗೆ ಕೇಂದ್ರ ಸರ್ಕಾರ ಮೀಸಲಿಟ್ಟಿರುವ 5,300 ಕೋಟಿ ರೂ. ಈವರೆಗೂ ಬಿಡುಗಡೆ ಮಾಡಿಲ್ಲ. 4 ದಶಕಗಳಿಂದ ಹೋರಾಟ ಮುಂದುವರೆದಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಜನರಿಗೆ, ರೈತರಿಗಾಗಿ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

ಮೆರವಣಿಗೆಯೂ ಗಾಂಧಿ ವೃತ್ತದಿಂದ ಆರಂಭವಾಗಿ ಎಸ್‌ಬಿಐ, ಒನಕೆ ಓಬವ್ವ, ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ಜಿಲ್ಲಾ ಪಂಚಾಯಿತಿ ಆವರಣದ ಸಂಸದರ ಕಚೇರಿ ತಲುಪಿತು.

ಹಸಿರುಸೇನೆ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಬೋರೇಶ್, ಎಚ್.ಆರ್.ಶಶಿಧರ್, ಚಿತ್ತಪ್ಪ, ಶಿವಣ್ಣ, ಬಸವರಾಜ್, ನಿರಂಜನಮೂರ್ತಿ, ಮೂಡಲಗಿರಿಯಪ್ಪ, ಕೃಷ್ಣಪ್ಪ, ಆರಲಹಳ್ಳಿ ಈಶ್ವರಪ್ಪ, ತಿಪ್ಪೇಸ್ವಾಮಿ, ಗಿರೀಶ್, ತುಳಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net