ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮ

kagodu
Published on

ಆನಂದಪುರ: ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಬದುಕಿನ ಕೊನೆಯವರೆಗೂ ಕಾಂಗ್ರೆಸ್​ನಲ್ಲೇ ಇರುತ್ತೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿಯ ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕನಾಗಿ, ವಿಧಾನಸಭೆ ಸ್ಪೀಕರ್ ಆಗಿ, ಕಂದಾಯ ಸಚಿವನಾಗಿ ಸಾಗರ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದೇನೆ. ಕೃಷಿ ಮತ್ತು ತೋಟಗಾರಿಕೆ ವಿವಿಯನ್ನು ಅತ್ಯಂತ ಕುಗ್ರಾಮವಾಗಿರುವ ಇರುವಕ್ಕಿಯಲ್ಲಿ ನಿರ್ವಿುಸುವ ಮಹತ್ವವನ್ನು ವಿವರಿಸಿದರು.

ನಿರೀಕ್ಷೆಗೂ ಮೀರಿ ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ. ಭವಿಷ್ಯದ ದಿನದಲ್ಲಿ ಹೋಬಳಿ ಕೇಂದ್ರವಾದ ಆನಂದಪುರ ಇಡೀ ರಾಜ್ಯ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳನ್ನು, ಸಂಶೋಧಕರನ್ನು ತನ್ನತ್ತ ಸೆಳೆದು ಪ್ರಮುಖ ಸ್ಥಾನವಾಗಲಿದೆ ಎಂದರು.

ಕೃಷಿ ಮತ್ತು ತೋಟಗಾರಿಕೆ ವಿವಿ ಅಧಿಕಾರಿಗಳಾದ ಡಾ. ಗಣಪತಿ, ಬಸವರಾಜ್, ಉಲ್ಲಾಸ್, ಖಾನ್, ಇಂಜಿನಿಯರ್​ಗಳಾದ ಜಿ.ಕೆ.ಬಸನಗೌಡ, ಜಯರಾಮ್ ಭಟ್ ಇತರರು ಕಾಮಗಾರಿ ಪ್ರಗತಿ ವಿವರಿಸಿದರು.

ಕಾರ್ಯಕರ್ತರ ಸಭೆ: ನಂತರ ಇಲ್ಲಿನ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ, ಕರೊನಾ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ದೂರಿದರು.

ಕೇವಲ ಘೊಷಣೆ, ಭಾಷಣ ಮತ್ತು ಚಪ್ಪಾಳೆಗಳಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಪ್ರಬಲ ಇಚ್ಛಾಶಕ್ತಿ, ಆರ್ಥಿಕ ಅಭಿವೃದ್ಧಿಯ ಚಾಣಾಕ್ಯತನ ನಮ್ಮ ದೇಶಕ್ಕೆ ಅಗತ್ಯವಿದೆ. ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ದೇಶದ ಚುಕ್ಕಾಣಿ ಹಿಡಿಯಲಿದೆ. ರಾಜ್ಯದ ಗ್ರಾಮೀಣ ರೈತರ ಬಗರ್​ಹುಕುಂ ಸಮಸ್ಯೆ ಶೀಘ್ರವಾಗಿ ಇತ್ಯರ್ಥವಾಗಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಜಿಪಂ ಸದಸ್ಯೆ ಅನಿತಾಕುಮಾರಿ, ಮಾಜಿ ಸದಸ್ಯ ಹೊನಗೋಡು ರತ್ನಾಕರ್, ತಾಪಂ ಸದಸ್ಯರಾದ ಜ್ಯೋತಿ ಕೋವಿ, ಹೇಮಾರಾಜಪ್ಪ, ಎಪಿಎಂಸಿ ಸದಸ್ಯ ಭರ್ಮಪ್ಪ, ಕಾಂಗ್ರೆಸ್ ಮುಖಂಡರಾದ ಬಿ.ಆರ್.ಜಯಂತ್,ಪ್ರಕಾಶ ನಾಯಕ್, ಮೋಹನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net