ಸಮ ಸಮಾಜದ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸಿ

2
Published on

ಮೈಸೂರು: ಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮ ರಂಗ ಸಮಸಮಾಜದ ನಿರ್ಮಾಣಕ್ಕೆ ಸಲಹೆಗಾರನಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.


ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಾನಸಗಂಗೋತ್ರಿಯ ರಾಣಿಬಹಾದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಾಧ್ಯಮಗಳು ಯಾರನ್ನೂ ಹೊಗಳಲು ಇರುವುದಲ್ಲ. ಬದಲಿಗೆ ಸಮಾಜದ ಲೋಪ-ದೋಷ, ಆಗು-ಹೋಗುಗಳ ಕುರಿತು ವಿಮರ್ಶೆ ಮಾಡಬೇಕು. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಧ್ವನಿಯಾಗಿಯೂ ಕೆಲಸ ಮಾಡಬೇಕು ಎಂದರು.


ಮಾಧ್ಯಮ ರಂಗ ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಒಪ್ಪಿಕೊಳ್ಳಬಾರದು. ಜನಪರವಾಗಿ ಇರಬೇಕು. ಜನರಿಗೆ ಸ್ಪಂದಿಸದ ಚುನಾಯಿತಿ ಜನಪ್ರತಿನಿಧಿಯನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದರು.


ಅನೇಕ ಹೋರಾಟಗಾರರ ಪ್ರಾಣ ತ್ಯಾಗದಿಂದ ಗಳಿಸಿದ ಸ್ವಾತಂತ್ರೃ ಉಳಿಯಬೇಕಾದರೆ ಮಾಧ್ಯಮ ರಂಗ ನಿರ್ಭೀತ, ನಿಷ್ಪಕ್ಷಪಾತ ಹಾಗೂ ಧರ್ಮ ನಿರಪೇಕ್ಷತೆಯಿಂದ ಕಾರ್ಯನಿರ್ವಹಿಸುವುದು ಅತಿ ಅಗತ್ಯವಾಗಿದೆ. ಸಮಾನತೆಯ ಆಶಯಕ್ಕೆ ಪೂರಕವಾಗಿಯೂ ಕೆಲಸ ಮಾಡಬೇಕು ಎಂದು ಆಶಿಸಿದರು.


ಪತ್ರಕರ್ತರಾದ ಎಂ.ವಿನೋದ್, ಡಿ.ಜೆ.ವಿನಯ್ ದೊಡ್ಡಕೊಪ್ಪಲು, ಪಿ.ಶಿಲ್ಪಾ, ಎಸ್.ಆರ್.ಮಧುಸೂದನ್, ಎಸ್.ಪುನೀತ್ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತೆ ಗಾಯತ್ರಿ ವಿ.ರಾಜ್ ಸೇರಿದಂತೆ 9 ಜನರನ್ನು ಅಭಿನಂದಿಸಲಾಯಿತು.


ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಶಿವಕುಮಾರ್, ಜಿಎಸ್‌ಎಸ್ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಶ್ರೀಹರಿ ದ್ವಾರಕನಾಥ, ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net