ಸಮ ಸಮಾಜಕ್ಕೆ ಶ್ರಮಿಸಿದ ಮಹಾಪುರುಷ

31NGD3
Published on

ನಂಜನಗೂಡು: ಬ್ರಹ್ಮಶ್ರೀ ನಾರಾಯಣಗುರುಗಳು ಅಸ್ಪಶ್ಯತೆ ವಿರುದ್ಧ ಹೋರಾಡಿದ ದಾರ್ಶನಿಕ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಚೇತನ ಎಂದು ತಾಲೂಕು ಈಡಿಗರ ಸಂಘದ ಉಪಾಧ್ಯಕ್ಷ ಜಿ.ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.


ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ದೇವರ ಸ್ವಂತ ನಾಡು ಎಂಬ ಹಿರಿಮೆಯನ್ನು ಹೊಂದಿರುವ ಕೇರಳ ರಾಜ್ಯ ಸ್ವಾತಂತ್ರೃ ಪೂರ್ವದಲ್ಲಿ ಜಾತಿಯ ಅಸಮಾನತೆಯ ಕೂಪದಲ್ಲಿ ನಲುಗಿತ್ತು. ಈ ಸಂದರ್ಭ ನಾರಾಯಣ ಗುರುಗಳು ಸಮಾಜಕ್ಕೆ ಉತ್ತಮ ದಾರಿ ತೋರುವ ಪ್ರಯತ್ನ ಮಾಡಿದರು. ದುಶ್ಚಟಗಳನ್ನು ಬಿಟ್ಟು ಶುದ್ಧ ಬದುಕು ನಡೆಸುವಂತೆ ಜನರಿಗೆ ಕರೆ ಕೊಟ್ಟರು. ಅಸ್ಪಶ್ಯ ಜನರು ಉದ್ಧಾರ ಆಗಬೇಕೆಂದರೆ ಕುಡಿತ ಮತ್ತಿತರ ದುಶ್ಚಟ ಬಿಡಬೇಕು. ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದು ಪ್ರತಿಪಾದಿಸಿದರು. ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಶಿವನ ದೇವಾಲಯ ಸ್ಥಾಪಿಸಿದ್ದಲ್ಲದೆ, ಶಿಕ್ಷಣದ ಮಹತ್ವ ಸಾರಿದರು. ಇದರಿಂದಲೇ ಇಂದಿಗೂ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಶೋಷಿತ ಸಮಾಜದ ಜನರೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ನಾರಾಯಣಗುರುಗಳ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅವರು ತೋರಿದ ದಾರಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಾಕಾಂತ್, ಈಡಿಗರ ಸಂಘದ ಉಪಾಧ್ಯಕ್ಷ ಎನ್.ಟಿ.ಗಿರೀಶ್, ಖಜಾಂಚಿ ನಾರಾಯಣ್, ಮುಖಂಡರಾದ ಕೃಷ್ಣಕುಮಾರ್, ಮಂಜುನಾಥ್, ಸುರೇಶ್, ರಘು, ರಾಘವೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net