

ಚಿತ್ರದುರ್ಗ: ನಮ್ಮ ನಾಡಿನಲ್ಲಿ ಬಸವಣ್ಣ ಜನಿಸದೆ ಇದಿದ್ದರೆ ನಾವೆಲ್ಲರೂ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮುರುಘಾಮಠದಿಂದ ಬುಧವಾರ ನಗರದ ಹೊರವಲಯದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತ್ಯುತ್ಸವದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಿರಾಶ್ರಿತರೆಲ್ಲರೂ ಬಸವಣ್ಣನವರ ಮಕ್ಕಳು.
ಬಸವಣ್ಣನವರು ಸಮಾನತೆ, ಸಮ ಸಮಾಜದ ನಿರ್ಮಾಣ ಬಯಸಿದ್ದರು. ಉಳ್ಳವರು ಇಂತಹ ನಿರಾಶ್ರಿತರ ಕೇಂದ್ರಗಳಲ್ಲಿ ಜಯಂತಿ ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ನಮಗೆ ಯಾರೂ ಇಲ್ಲ ಎಂದು ನಿರಾಶ್ರಿತರು ಭಾವಿಸುವುದು ಬೇಡ. ನಿಮ್ಮೊಂದಿಗೆ ಬಸವಣ್ಣನವರಿದ್ದಾರೆ ಎಂದರು.
ನಮ್ಮ ಜಿಲ್ಲೆಯಲ್ಲಿ ಈ ಆಶ್ರಮ ಇರುವುದು ಆಶಾದಾಯಕ. ಶ್ರೀಮಠವು ಬಸವಣ್ಣನವರ ಆಶಯದಂತೆ ಸಮಾಜದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ಕೇಂದ್ರದಲ್ಲಿ 282 ಜನರಿದ್ದಾರೆ. ಬಸವೇಶ್ವರ ಆಸ್ಪತ್ರೆಯಲ್ಲಿ ನಿರಾಶ್ರಿತರಿಗೆ ನಿತ್ಯ 25 ಜನರಂತೆ ನಿತ್ಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅವರು ಮಾತನಾಡಿ, ಮಾನವತಾವಾದದ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ. ಸುಸಜ್ಜಿತ ಮತ್ತು ಪೂರಕವಾದ ಆಶ್ರಮ ಇದಾಗಿದೆ ಎಂದರು.
ವಕೀಲ ಉಮೇಶ್, ನಿರಾಶ್ರಿತ ಕೇಂದ್ರದ ಸಂಯೋಜಕರಾದ ಎಂ.ಮಹಾದೇವಯ್ಯ, ವಿಜಯಕುಮಾರ, ಎಸ್‌ಜೆಎಂ ವಿದ್ಯಾ ಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ, ಹರಗುರುಚರ ಮೂರ್ತಿಗಳು ಇದ್ದರು.
ಎಸ್‌ಜೆಎಂಐಟಿ ಕಾಲೇಜಿನ ವಿಶಾಲಾಕ್ಷಿ 26 ನಿರಾಶ್ರಿತ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದರು. ಜಮುರಾ ಕಲಾಲೋಕದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಡಾ.ಎಚ್.ಜೆ. ಲೋಕೇಶ್ ಸ್ವಾಗತಿಸಿ, ಎಂ. ಪಲ್ಲವಿ ವಂದಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.