

ಚಿತ್ರದುರ್ಗ: ಧರ್ಮಾಧಾರಿತ ದೇಶ ಕಟ್ಟಲು ಹೊರಟಿರುವವರ ವಿರುದ್ಧ ಕಮ್ಯುನಿಸ್ಟ್ ಪಕ್ಷದ ಹೋರಾಟ ನಿರಂತರವಾಗಿರುತ್ತದೆ ಎಂದು ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ‌್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದ ಪಕ್ಷದ ಕಾರ‌್ಯಾಲಯದಲ್ಲಿ ಮಂಗಳವಾರ 19 ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಮ ಸಮಾಜ ನಿರ್ಮಾಣ ಕಮ್ಯುನಿಸ್ಟ್ ಪಕ್ಷದ ಗುರಿ. ಪಕ್ಷಕ್ಕೆ ದೇಶಕ್ಕಾಗಿ ಪ್ರಾಣ ಕೊಟ್ಟ ಇತಿಹಾಸವಿದೆ. ಚಳವಳಿ, ಹೋರಾಟಗಳ ಮೂಲಕ ಜನರ ಮನಸ್ಸು ಗೆದ್ದು ಕಮ್ಯನಿಸ್ಟ್ ಕಾರ‌್ಯಕರ್ತರು ರಾಜಕೀಯವಾಗಿ ಅಧಿಕಾರ ಹಿಡಿಯಬೇಕು. ಬಿಹಾರ, ತಮಿಳುನಾಡು, ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಶಾಸಕರಿದ್ದಾರೆ. ಚುನಾವಣೆಯಲ್ಲಿ ಯಾರನ್ನಾದರೂ ಗೆಲ್ಲಿಸುವ, ಯಾರನ್ನಾದರೂ ಸೋಲಿಸುವ ಶಕ್ತಿ ಪಕ್ಷಕ್ಕಿದೆ. ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಆದಿವಾಸಿಗಳ ಹಕ್ಕಿಗಾಗಿ ಹೋರಾಟ, ಸ ರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ಧ ಹೋರಾಟ ನಡೆಸುವಂತೆ ಕಾರ‌್ಯಕರ್ತರಿಗೆ ಸಲಹೆ ನೀಡಿದರು.
ಸಿಪಿಐ ಜಿಲ್ಲಾ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ಕಮ್ಯುನಿಸ್ಟ್ ಕಾರ‌್ಯಾಲಯದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಪಕ್ಷದ ಅನೇಕ ಕಾರ‌್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಹಟ್ಟಿ ಚಿನ್ನದ ಗಣಿ ಪುನರಾರಂಭಿಸಬೇಕು. ಸೂರಿಗಾಗಿ ಸಮರ ನಮ್ಮ ಹೋರಾಟದ ಉದ್ದೇಶ. ವಿದ್ಯಾಭ್ಯಾಸ, ಆರೋಗ್ಯವನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಿಪಿಐ ರಾಜ್ಯ ಮಂಡಳಿ ಸದಸ್ಯರಾದ ಸಿ.ವೈ.ಶಿವರುದ್ರಪ್ಪ, ಟಿ.ಆರ್.ಉಮಾಪತಿ ಹಾಗೂ ಸಿ.ವೈ.ಸತ್ಯಕೀರ್ತಿ, ಅಮಿನಾಬಿ, ಕುಮಾರಸ್ವಾಮಿ, ಗಿರೀಶ್, ಜಾಫರ್ ಷರೀಫ್, ಪೆನ್ನಯ್ಯ ಇದ್ದರು.
---