ಸಭೆಯಲ್ಲೂ ಶಾಸಕರೇ ಟಾರ್ಗೆಟ್

16_09_Mdy_06(Disa Meeting)
Published on

ವಿಜಯವಾಣಿ ಸುದ್ದಿಜಾಲ ಮಂಡ್ಯ

ಜಿಲ್ಲೆಯ ಜೆಡಿಎಸ್ ಶಾಸಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಸಂಸದೆ ಸುಮಲತಾ ಅಂಬರೀಷ್ ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲೂ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರ ವಿಷಯ ಕುರಿತಂತೆ ಟಾರ್ಗೆಟ್ ಮಾಡಿ ಗಣಿ ಅಧಿಕಾರಿಗೆ ತರಾಟೆ ತೆಗೆದುಕೊಂಡರು.

ಸಭೆ ಆರಂಭವಾಗುತ್ತಲೇ ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ರಮೇಶ್‌ರಾಜು, ಮಾಜಿ ಶಾಸಕ ಕೆ.ಕೆಂಪೇಗೌಡ ಹಾಗೂ ಕೆ.ವಿ.ಶಂಕರಗೌಡರ ಪತ್ನಿ ಸುಶೀಲಮ್ಮ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಸಂಸದೆ, ಪಾಂಡವಪುರದಲ್ಲಿ ಇತ್ತೀಚೆಗೆ ಗಣಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದಿದ್ದ ಗಣಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರೇ ಖುದ್ದು ನಿಂತು ಆವಾಜ್ ಹಾಕಿ, ಲಾರಿಗಳನ್ನು ಬಿಡಿಸಿ ಕಳುಹಿಸಿದ್ದ ಘಟನೆ ಕುರಿತು ಸ್ಪಷ್ಟೀಕರಣ ಕೊಡಿ ಎಂದು ಸಂಸದರು ಕೇಳಿದರು.

ಇದಕ್ಕೆ ಉತ್ತರಿಸಿದ ಹಿರಿಯ ಭೂವಿಜ್ಞಾನಿ ಪದ್ಮಜಾ, ನಮಗೆ ಮಾಹಿತಿ ಬಂದಾಗ ಅಲ್ಲಿದ್ದ ನಮ್ಮ ಅಧಿಕಾರಿಗಳು ಎಲ್ಲ 15 ಲಾರಿಗಳ ನಂಬರ್ ನೋಟ್ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದರು.

ಸಂಸದೆ ಪ್ರತಿಕ್ರಿಯಿಸಿ, ನಾನು ವಿಡಿಯೋ ನೋಡಿದ್ದೇನೆ. ಅದರಲ್ಲಿ ಪಾಂಡವಪುರ ಶಾಸಕರು ಲಾರಿಗಳನ್ನು ಬಿಟ್ಟು ಕಳಿಸ್ರೀ ಎಂದು ಅಬ್ಬರಿಸುತ್ತಿದ್ದಾರೆ. ಏನದು ಎಂದಾಗ, ಎಲ್ಲ ಲಾರಿ ಮಾಲೀಕರಿಗೂ ಸಮನ್ಸ್ ಜಾರಿಯಾಗಿದೆ ಎಂದು ಸಮಜಾಯಿಷಿ ನೀಡಿದರು.

ಕೆಎಸ್‌ಆರ್ ಸೆನ್ಸಿಂಗ್‌ನಿಂದ ಡ್ರೋನ್ ಸರ್ವೇ ಮಾಡಿಸಲಾಗುತ್ತದೆ. ಅಕ್ರಮ ಗಣಿಕೋರರಿಂದ 110 ಕೋಟಿ ರೂ. ಕಂದಾಯ ಶುಲ್ಕ ಹಾಗೂ 180 ಕೋಟಿ ರೂ. ದಂಡ ವಿಧಿಸಲಾಗಿದೆ. ಒಟ್ಟಾರೆ 290 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗುವುದು. ಈ ದಂಡವನ್ನು ಕಟ್ಟಿಸಲಾಗುವುದು. ಆದರೆ ಅವರು ಕೋರ್ಟ್‌ಗೆ ಹೋಗಿದ್ದಾರೆ ಎಂದರು.

ಪ್ರಕರಣ ಕೋರ್ಟ್‌ಗೆ ಹೋದರೆ ಅದರಿಂದ ಕೇಸ್ ಹೊರ ತರುವ ದಾರಿ ಕಂಡುಕೊಳ್ಳಿ ಎಂದು ಸುಮಲತಾ ಅಂಬರೀಷ್ ಸಲಹೆ ನೀಡಿದರು.

ಆಗ ಸಮಿತಿ ಸದಸ್ಯ ಬೇಲೂರು ಸೋಮಶೇಖರ್ ಮಾತನಾಡಿ, ಗಣಿ ಅಧಿಕಾರಿಗಳು ನೀಡಿರುವ ಮಾಹಿತಿ ಸಂಪೂರ್ಣ ಸುಳ್ಳು. ಕೆಲವೇ ಸಭೆಗಳ ಹಿಂದೆ ಇದೇ ದಿಶಾ ಸಭೆಯಲ್ಲಿ ಅಕ್ರಮ ಗಣಿ ಮಾಲೀಕರ ಮೇಲೆ 800ಕ್ಕೂ ಹೆಚ್ಚು ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ಕೊಟ್ಟಿದ್ದರು. ಈಗ 290 ಕೋಟಿ ರೂ. ಮಾತ್ರ ಎನ್ನುತ್ತಿದ್ದೀರಿ. ಏನಿದರ ಅರ್ಥ? ಯಾರನ್ನು ಓಲೈಸಲು, ಯಾರನ್ನು ರಕ್ಷಣೆ ಮಾಡಲು ನೀವು ಕೆಲಸ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಆದರೆ ಗಣಿ ಅಧಿಕಾರಿಗಳಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಹೊರಬೀಳಲಿಲ್ಲ.

ಜಿಲ್ಲೆಯಲ್ಲಿ ನಡೆಯುವ ಕೇಂದ್ರ ಪುರಸ್ಕೃತ ಯೋಜನೆಗಳ ಕಾರ್ಯಕ್ರಮಗಳನ್ನು ನಡೆಸುವಾಗ ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ. ನನಗೆ ಲೋಕಸಭೆ ಸದನದಲ್ಲೂ ಕೇಂದ್ರ ಜಲಶಕ್ತಿ ಸಚಿವರು ಖುದ್ದು ತಿಳಿಸಿದ್ದಾರೆ. ಕೇಂದ್ರ ಜಲಶಕ್ತಿ ಯೋಜನೆಗಳ ಯಾವುದೇ ಕಾರ್ಯಕ್ರಮ ಅನುಷ್ಠಾನಗೊಳಿಸುವಾಗ ಸಂಸದರ ಸಕ್ಷಮದಲ್ಲಿಯೇ ನಡೆಯಬೇಕು. ಸಂಸದರ ಉಪಸ್ಥಿತಿಯಿಲ್ಲದೆ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತಿಲ್ಲ ಎಂದಿದೆ. ಆದರೆ, ಇಲ್ಲಿನ ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಕ್ರಮದ ಹಿಂದಿನ ರಾತ್ರಿಯೋ ಅಥವಾ ಬೆಳಗ್ಗೆಯೋ ಒಂದು ಸಂದೇಶ ಹಾಕಿಬಿಡುತ್ತಾರೆ. ಅಂದರೆ ಸಂಸದರಿಗೆ ತಿಳಿಸಿದ್ದೇವೆ ಎಂತಲೂ, ಸಂಸದರು ಬಾರದಂತೆಯೂ ತಡೆಯುವ ಹುನ್ನಾರವಿದು ಎಂದು ಸುಮಲತಾ ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಇನ್ಮುಂದೆ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಮಾಡುವ ಕಾರ್ಯಕ್ರಮಗಳಿಗೆ ಸಂಸದರನ್ನು ಆಹ್ವಾನಿಸುವುದು, ಶಿಷ್ಟಾಚಾರ ಪಾಲಿಸುವುದು ಕಡ್ಡಾಯವಾಗಿದೆ. ತಪ್ಪಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗಣಿ ಅಕ್ರಮದಲ್ಲಿ ಸರಿಸುಮಾರು ಸಾವಿರಾರು ಕೋಟಿ ರೂಗಳಷ್ಟು ರೆವಿನ್ಯೂ ವಸೂಲಾತಿಯಾಗಬೇಕಿದೆ. ಆದರೆ ಇಲ್ಲಿ ವಸೂಲಾತಿಗೆ ಆದ್ಯತೆಯನ್ನೇ ನೀಡಲಾಗಿಲ್ಲ. ಈಗಾಗಲೇ ಕೋವಿಡ್ ಹಾಗೂ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ರೈತರ ಬೆಳೆ ಹಾನಿಯಾಗಿದ್ದು, ಹಳ್ಳಿ ಹಳ್ಳಿಗಳಲ್ಲಿ ಮನೆಗೋಡೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳಿಗೆ ಒಂದಷ್ಟು ಅನುದಾನ ಸಿಗುತ್ತಿತ್ತು. ಇದರಿಂದ ನೊಂದವರಿಗೆ ಸ್ಪಂದಿಸುವ ಕೆಲಸ ಮಾಡಬಹುದಿತ್ತು. ಆದರೆ ರೆವಿನ್ಯೂ ಬರಲ್ಲ ಅಂದಾಗ ಯಾವ ಕೆಲಸವೂ ಆಗಲ್ಲ ಎಂದು ಸಂಸದೆ ಆಕ್ರೋಶ ಹೊರಹಾಕಿದರು.

ಜಿಪಂ ಆಡಳಿತಾಧಿಕಾರಿ ಜಯರಾಂ ರಾಯಪುರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇತರರಿದ್ದರು.

ಡಿಸಿ ವಿರುದ್ಧ ಸಂಸದೆ ಅಸಮಾಧಾನ

ಇಂತಹ ಸಭೆಗಳಿಗೆ ಜಿಲ್ಲಾಧಿಕಾರಿ ಇಲ್ಲದಿರುವುದು ಬಹಳ ಬೇಸರ ತರಿಸಿದೆ. ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಅವರಿಗೆ ಜಿಲ್ಲಾಧಿಕಾರಿ ಮೂಲಕ ಎಚ್ಚರಿಕೆ ಕೊಡಿಸುವುದು ಅಗತ್ಯ. ಆದರೆ, ದಿಶಾ ಸಭೆಗಳಿಗೆ ಜಿಲ್ಲಾಧಿಕಾರಿ ಗೈರಾಗುತ್ತಿದ್ದಾರೆ. ಇದರಿಂದ ನನಗೆ ತೀವ್ರ ಬೇಸರ ಉಂಟಾಗಿದೆ ಎಂದು ಸುಮಲತಾ ಅಸಮಾಧಾನ ವ್ಯಕ್ತಪಡಿಸಿದರು.ಅಧಿವೇಶನ ಹಿನ್ನೆಲೆಯಲ್ಲಿ ದಿಶಾ ಸಭೆಗೆ ನಿರೀಕ್ಷೆಯಂತೆ ಶಾಸಕರು ಗೈರಾಗಿದ್ದರು. ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳ ಗೈರು ಕೂಡ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net