

ಬೆಳಗಾವಿ: ನಗರದಲ್ಲಿ ಬೀದಿ ನಾಯಿಗಳ ಕಾಟ, ವಾರ್ಡ್ಗಳ ಅಭಿವೃದ್ಧಿ ಹಣ ಹಂಚಿಕೆಯಲ್ಲಿ ತಾರತಮ್ಯ, ಪಾಲಿಕೆ ಆಸ್ತಿಗಳ ಸಂರಕ್ಷಣೆ, ಆದಾಯ ಸೋರಿಕೆ, ಪರಿಷತ್ ಸಭೆಯಲ್ಲಿ ಮೇಯರ್ಗೆ ಅಗೌರವ ಸೇರಿ ಹಲವು ವಿಷಯಗಳು ಶನಿವಾರ ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷೆಯಲ್ಲಿ ಜರುಗಿದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು.
ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಸಮಸ್ಯೆಗಳು, ಅಭಿವೃದ್ಧಿಗೆ ಅನುದಾನ ಬಾರದಿರುವ ಕುರಿತು ಬೆಳಕು ಚೆಲ್ಲಿದರು. ನಗರದಲ್ಲಿ ಬೀದಿ ನಾಯಿಗಳ ಉಪಟಳ ಅಧಿಕವಾಗಿದ್ದು, ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಒಬ್ಬಂಟಿಗರಾಗಿ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲ ಮಕ್ಕಳನ್ನು ಕಚ್ಚಿ ಗಾಯಗೊಳಿಸಿದೆ. ಈ ಪ್ರತಿ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಆರೋಗ್ಯ ವಿಭಾಗ ಅಧಿಕಾರಿಗಳು ಬೀದಿ ನಾಯಿಗಳ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸುತ್ತಿದ್ದಾರೆ. ಆದರೆ, ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೀದಿಗಳಲ್ಲಿ ಓಡಾಡುತ್ತಿರುವ ನಾಯಿಗಳನ್ನು ಶ್ರೀನಗರದಲ್ಲಿರುವ ಬೀದಿ ನಾಯಿಗಳ ಕೊಠಡಿಯಲ್ಲಿ ಕೂಡಿ ಹಾಕಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಶಸಚಿಕಿತ್ಸೆಗೆ ಒಳಪಡಿಸಿರುವ ನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಿ. ಇಲ್ಲ ಪ್ರತ್ಯೇಕ ಕೇಂದ್ರ ಸ್ಥಾಪಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಬೀದಿ ನಾಯಿಗಳು, ದನಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ. ಪಾಲಿಕೆ ವೈದ್ಯಾಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಖಾಸಗಿ ಕ್ಲಿನಿಕ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೇವಲ ಹಣ ಖರ್ಚು ಮಾಡಲು ಸೀಮಿತಗೊಳ್ಳಬಾರದು. ಬೀದಿ ನಾಯಿ ಹೆಸರಿನಲ್ಲಿ ಕೋಟ್ಯಂತರ ರೂ. ವ್ಯಯಿಸಿರುವ ಕುರಿತು ತನಿಖೆಗೊಳಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅದಕ್ಕೆ ಸ್ಪಂದಿಸಿದ ವೈದ್ಯಾಧಿಕಾರಿಗಳು, ನಗರದಲ್ಲಿ ಬರೊಬ್ಬರಿ 22 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಪ್ರತಿ ವರ್ಷ 2,500 ರಿಂದ 3,000 ನಾಯಿಗಳನ್ನು ಸಂತಾನಶಕ್ತಿಹರಣ ಶಸಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಆದರೆ, ನಾಯಿಗಳ ಜನನ ಪ್ರಮಾಣ ಅಧಿಕವಾಗಿರುವುದರಿಂದ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವರ್ಷ ಪಾಲಿಕೆ ಬಜೆಟ್ನಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ 75 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದೇವೆ. ಹಣ ವ್ಯಯಿಸಿದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಶಾಸಕ ಆಸೀಫ ಸೇಠ್, ಉಪಮೇಯರ್ ಆನಂದ ಚೌಹಾಣ, ಹಣಮಂತ ಕೊಂಗಾಲಿ, ಮುಜಮ್ಮಿಲ್ ಡೋಣಿ, ಗಿರೀಶ ಧೋಂಗಡಿ, ರವಿ ದೋತ್ರೆ, ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಇತರರಿದ್ದರು.
ಹತ್ತು ಕೋಟಿ ರೂ. ಖರ್ಚಿನ ಲೆಕ್ಕ ಕೊಡಿ
ವಾರ್ಡ್ಗಳ ಅಭಿವೃದ್ಧಿ, ತೆರಿಗೆ ಸಂಗ್ರಹ ಸೇರಿ ಯಾವುದೇ ಖರ್ಚು ವೆಚ್ಚಗಳ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಮೇಲ್ನೋಟಕ್ಕೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಆಡಳಿತಾಧಿಕಾರಿ ಸಂದರ್ಭದಲ್ಲಿ 2022&23ನೇ ಸಾಲಿನಲ್ಲಿ ವಾರ್ಡ್ಗಳ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಲೆಕ್ಕದಲ್ಲಿ ಹತ್ತು ಕೋಟಿ ರೂ. ಖರ್ಚು ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂಬುದರ ಕುರಿತು ಅಧಿಕಾರಿಗಳು ಲೆಕ್ಕ ನೀಡಬೇಕು. 2023&24ನೇ ಸಾಲಿನ 9.30 ಕೋಟಿ ರೂ. ಹಣ ಸಮರ್ಪಕ ಬಳಕೆಯಾಗಿಲ್ಲ. 2024&25ನೇ ಸಾಲಿನ ಬಜೆಟ್ನಲ್ಲಿ ಮೀಸಲಿಟ್ಟಿರುವ 10 ಕೋಟಿ ರೂ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು. ಅದಕ್ಕೆ ಸ್ಪಂದಿಸಿದ ಆಡಳಿತಾರೂಢ ಸದಸ್ಯರು, ಪ್ರತಿಪಕ್ಷಗಳ ಸದಸ್ಯರ ವಾರ್ಡ್ಗಳಿಗೆ 6 ಕೋಟಿ ರೂ, ಆಡಳಿತಾರೂಢ ಸದಸ್ಯರ ವಾರ್ಡ್ಗಳಿಗೆ 4 ಕೋಟಿ ರೂ. ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಬೆಳಗಾವಿ ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣದ ಜತೆಗೆ ಪ್ರತ್ಯೇಕ ಕೇಂದ್ರ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ, ಬೀದಿ ನಾಯಿಗಳ ಕೇಂದ್ರ ಸ್ಥಾಪನೆಗೆ ಸ್ಥಳಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶ್ರೀ ಸ್ಥಳ ಅಂತಿಮಗೊಳಿಸಲಾಗುವುದು. -ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ