

ಶಿರಸಿ: ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಮಾಹಿತಿ ನೀಡಲಷ್ಟೇ ಸೀಮಿತರಾಗಿದ್ದಾರೆ ಹೊರತು ಜನರಿಗೆ, ಕರೊನಾ ಸೋಂಕಿತರಿಗೆ ವಿಶ್ವಾಸ ತುಂಬುವ ಕಾರ್ಯ ಮಾಡುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೋವಿಡ್ ಸಹಾಯವಾಣಿ ರಚಿಸಿಕೊಂಡು ರೋಗಿಗಳಿಗೆ ಸಹಕಾರ ನೀಡಲಾಗುತ್ತಿದೆ. ಆದರೂ ಹೆಚ್ಚಿನ ಸಹಾಯ ಮಾಡಲಾಗುತ್ತಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಸೌಲಭ್ಯದ ಕೊರತೆಯಿರುವುದರಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಜಿಲ್ಲೆಯ ಜನರು ರೊಚ್ಚಿಗೆ ಏಳುವ ಪೂರ್ವ ಆಡಳಿತ ವರ್ಗ ವ್ಯವಸ್ಥೆ ಸುಧಾರಿಸಬೇಕು. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಬೆಡ್ ಕೊರತೆ ಕಾಡುತ್ತಿದೆ. ಚಿಕಿತ್ಸೆ ವ್ಯವಸ್ಥಿತವಾಗಿ ಸಿಗುತ್ತಿಲ್ಲ. ಜಿಲ್ಲೆಯ ಜನರು ವೈದ್ಯಕೀಯ ವ್ಯವಸ್ಥೆಯೆಡೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರವಿರುವ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾರ್ಥ ಬಿಟ್ಟು ಜನಸೇವೆ ಮಾಡಬೇಕು ಎಂದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳಿವೆ? ಎಷ್ಟು ವೆಂಟಿಲೇಟರ್ಗಳಿವೆ? ಎಷ್ಟು ಆಕ್ಸಿಜನ್ ವ್ಯವಸ್ಥೆಯಿದೆ? ಎಂಬಿತ್ಯಾದಿ ಕುರಿತು ಮಾಹಿತಿ ಕೇಳಿದರೂ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಹಾಸಿಗೆ ಖಾಲಿಯಿದ್ದರೂ ಸೋಂಕಿತರಿಗೆ ಅವಕಾಶ ನೀಡುತ್ತಿಲ್ಲ ಎಂದರು.
ಈಗಾಗಲೇ ಪ್ರತೀ ತಾಲೂಕಿಗೆ 12 ಜಂಬೋ ಸಿಲಿಂಡರ್ ನೀಡಲು ತೀರ್ವನಿಸಿ ಜಿಲ್ಲಾಧಿಕಾರಿ ಅನುಮತಿಗಾಗಿ ಕಾಯಲಾಗುತ್ತಿದೆ. ಜತೆ, ರೋಗಿಗಳಿಗೆ ಹಣ್ಣು, ಹಂಪಲು, ಜ್ಯೂಸ್ ವಿತರಿಸಲೂ ಅವಕಾಶ ಕೇಳಲಾಗಿದ್ದು, ಅನುಮತಿ ಸಿಕ್ಕ ನಂತರ ಕಾರ್ಯಪ್ರವೃತ್ತರಾಗಲಾಗುವುದು ಎಂದರು.
ಶ್ರಮಿಕ ವರ್ಗಕ್ಕೆ ಸರ್ಕಾರ ಪರಿಹಾರ ನೀಡಬೇಕು. ವಿಶೇಷ ಪ್ಯಾಕೇಜ್ ಘೊಷಿಸುವ ಮೂಲಕ ಜನರ ಸಂಕಷ್ಟ ಪರಿಹರಿಸಬೇಕು ಎಂದರು.
ಈ ವೇಳೆ ಪಕ್ಷದ ಪ್ರಮುಖರಾದ ದೀಪಕ ದೊಡ್ಡೂರು, ಜಗದೀಶ ಗೌಡ, ಬಸವರಾಜ ದೊಡ್ಮನಿ ಇದ್ದರು.