

ಹೊಸನಗರ:ಭೂ ಮಂಜೂರಾತಿ ಸಮಸ್ಯೆಗಳ ಇತ್ಯರ್ಥ ಸಂಬಂಧ ಕರಿಮನೆ ಗ್ರಾಪಂನಲ್ಲಿ ಶನಿವಾರ ಆಯೋಜಿಸಿದ್ದ ತುರ್ತು ಗ್ರಾಮಸಭೆಗೆ ಬರಲಾಗುವುದಿಲ್ಲ ಎಂದು ತಹಸೀಲ್ದಾರ್ ರಶ್ಮಿ ಹೇಳಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಪಂಚಾಯಿತಿ ಪ್ರತಿನಿಧಿಗಳನ್ನು ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಭೂ ಮಂಜೂರಾತಿ ಆಗದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಭೆ ಆಯೋಜಿಸಲಾಗಿತ್ತು. ಈ ಬಗ್ಗೆ ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದರೂ ಬರುವುದಿಲ್ಲ ಎಂದು ಹೇಳಿದ್ದನ್ನು ಕೇಳಿ ಗ್ರಾಮಸ್ಥರು ಸಿಟ್ಟಿಗೆದ್ದರು. ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ವರ್ಷಗಳಿಂದ ಜ್ವಲಂತ ಸಮಸ್ಯೆಗಳಿದ್ದರೂ ಅಧಿಕಾರಿಗಳು ಪರಿಹಾರ ಒದಗಿಸದೆ ನಿರ್ಲಕ್ಷೃ ತೋರುತ್ತಿದ್ದಾರೆ. ತಹಸೀಲ್ದಾರ್‌ಗೆ ಬನ್ನಿ ಮೇಡಂ ಅಂದರೆ, ಅವರು ಕಾರಣ ಹೇಳುತ್ತಾರೆ. ಹೀಗಿರುವಾಗ ಕೆಳಹಂತದ ಸಿಬ್ಬಂದಿಯನ್ನು ಕೂರಿಸಿಕೊಂಡು ಸಭೆಯಲ್ಲಿ ಏನು ಮಾಡುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಸಭೆಗೆ ಬರಬೇಕು. ಅಲ್ಲಿಯವರೆಗೆ ಬಾಗಿಲು ತೆರೆಯಲ್ಲ ಎಂದು ಪಟ್ಟುಹಿಡಿದರು. ಗ್ರಾಮದ ಪ್ರಮುಖರಾದ ದೇವಮ್ಮ ಗೋಪಾಲ್, ನಾಗರತ್ನ, ರಮೇಶ, ದೇವೇಂದ್ರಪ್ಪ, ಸತೀಶ ಪಟೇಲ್, ಪರ್ವತಪ್ಪ ಗೌಡ, ದೇವೇಂದ್ರ ಗೌಡ, ಹರೀಶ ಗೌಡ, ಅಂಬರೀಷ, ಮೂರ್ತಿ ಗೌಡ, ಸುಬ್ರಹ್ಮಣ್ಯ, ಗಣೇಶ, ರಾಮಪ್ಪ ಗೌಡ, ಸಂದೇಶ, ಗೋಪಾಲ ನಿಲ್ಸಕಲ್, ಸಿ.ಕೆ.ಸುಧಾಕರ್, ಜ್ಯೋತಿ, ಸುಶೀಲಾ, ಅನಿತಾ, ನೊಡೆಲ್ ಅಧಿಕಾರಿ ಕರಿಬಸವ ನಾಯ್ಕ ಮತ್ತಿತರರಿದ್ದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕರಿಮನೆ ಪಂಚಾಯಿತಿ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ತಾಪಂ ಇಒ ನರೇಂದ್ರಕುಮಾರ್, ತಹಸೀಲ್ದಾರ್ ಪರವಾಗಿ ಕಂದಾಯ ನಿರೀಕ್ಷಕ ಸುರೇಶ್ ಆಗಮಿಸಿದರು. ನಗರ ಮತ್ತು ಹೊಸನಗರ ಪಿಎಸ್‌ಐ ಬೇರೆ ಕಡೆ ತೆರಳಿರುವ ಕಾರಣ ರಿಪ್ಪನಪೇಟೆ ಪಿಎಸ್‌ಐ ಪ್ರವೀಣ್ಕುಮಾರ್, ನಗರ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಮೊದಲು ಸಮಸ್ಯೆ ಬಗೆಹರಿಸಿ ತಹಸೀಲ್ದಾರ್ ಪರವಾಗಿ ಮನವಿ ನನಗೆ ನೀಡಿ ಎಂದು ತಾಪಂ ಇಒ ನರೇಂದ್ರಕುಮಾರ್ ತಿಳಿಸಿದರು. ತಹಸೀಲ್ದಾರ್‌ಗೆ ಮತ್ತು ಜಿಪಂ ಸಿಇಒಗೆ ಮನವಿ ತಲುಪಿಸಿ ಇಲ್ಲಿಯ ಜನರಿಗೆ ನ್ಯಾಯ ನೀಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ನೀವು ಬಂದಿರುವುದಕ್ಕೆ ನಿಮಗೆ ಗೌರವ ನೀಡಿ ಮನವಿ ನೀಡುತ್ತೇವೆ. ಆದರೆ ತಹಸೀಲ್ದಾರರ ನಿರ್ಲಕ್ಷೃ ಮತ್ತು ಚಕ್ರಾದಿಂದ ನೀರು ಹರಿಸುವ ಯೋಜನೆಗೆ ನಮ್ಮ ವಿರೋಧವಿದೆ. ಮುಂದಿನ ದಿನದಲ್ಲಿ ಹೋರಾಟಕ್ಕೆ ಸಜ್ಜುಗೊಳಿಸುತ್ತೇವೆ. ನಮ್ಮ ಸಮಸ್ಯೆ ಬಗೆಹರಿಸಿ ಆಮೇಲೆ ಯೋಜನೆ ಕಾರ್ಯಗತ ಮಾಡಿ. ಅಲ್ಲಿಯವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು. ಬಳಿಕ ತಾಪಂ ಇಒಗೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಮನವಿ ಸಲ್ಲಿಸಿದರು.