

ಹುಬ್ಬಳ್ಳಿ : ವಿಧಾನ ಪರಿಷತ್ನ ಕೆಲವು ಬಿಜೆಪಿ ಸದಸ್ಯರು ನನ್ನನ್ನು ಸಭಾಪತಿ ಮಾಡಲು ವಿರೋಧಿಸುತ್ತಿದ್ದಾರೆ. ಪರಿಷತ್ನ 31 ಸದಸ್ಯರಲ್ಲಿ ಕೇವಲ ನಾಲ್ಕು ಜನರ ವಿರೋಧ ಇದೆ. ಇದೀಗ ಅವರೆಲ್ಲರನ್ನು ಸಮಾಧಾನಪಡಿಸಲಾಗಿದ್ದು, ಸಭಾಪತಿ ಮಾಡುವ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಈಗ ಬಂದವರನ್ನು ಏಕೆ ಸಭಾಪತಿ ಮಾಡಬೇಕೆಂಬ ಪ್ರಶ್ನೆ ಕೆಲವರಲ್ಲಿ ಇತ್ತು. ಆದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು "ನಮ್ಮ ನಾಲಿಗೆ ಒಂದೇ ಇರಬೇಕು. ಅವರನ್ನು ಸಭಾಪತಿ ಮಾಡಬೇಕು' ಎಂದಿದ್ದಾರೆ. ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ನನ್ನನ್ನು ಸಭಾಪತಿ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಬಿಜೆಪಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಅವರು ನನ್ನನ್ನು ಸಭಾಪತಿಯನ್ನಾಗಿಸುವ ಬಗ್ಗೆ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.
ನನ್ನನ್ನು ಬಿಜೆಪಿಯವರು ಸೈಡ್ಲೈನ್ ಮಾಡಿದ್ದಾರೋ ಅಥವಾ ಯಾವ ಲೈನ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಅಧಿವೇಶನ ಪ್ರಾರಂಭಗೊಂಡ ನಂತರ ಸಭಾಪತಿ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.